ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ

ತಳಿರು ತೋರಣಗಳಿಂದ ಶಾಲೆ ಸಿಂಗಾರ, ಶಿಕ್ಷಕರಿಂದ ಸ್ವಚ್ಛತಾ ಕಾರ್ಯ
Last Updated 15 ಮೇ 2022, 15:45 IST
ಅಕ್ಷರ ಗಾತ್ರ

ಹಾಸನ: ಬೇಸಿಗೆ ರಜೆ ಮು‌ಗಿದು ಶಾಲೆಗಳಿಗೆ ಸೋಮವಾರದಿಂದ ಮಕ್ಕಳು ಮರಳಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ.

ಶನಿವಾರ, ಭಾನುವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದಿದ್ದು, ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಶಾಲಾ ಆವರಣದಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ.

ಜಿಲ್ಲೆಯಲ್ಲಿರುವ 3090 ಶಾಲೆಗಳು ಪ್ರಾರಂಭಿಸಲಾಗುತ್ತಿದ್ದು, 2.22 ಲಕ್ಷ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು, ಸಿಬ್ಬಂದಿ ಹಲವೆಡೆ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದಾರೆ. ಹೂವು ನೀಡಿ ಸ್ವಾಗತಿಸಲು ಶಿಕ್ಷಕ ಸಮೂಹ ಸಜ್ಜಾಗಿದೆ. ಶಾಲೆ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

‌ಕೊರೊನಾ ಕಾರಣಕ್ಕೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾದ್ದರಿಂದ ಸರ್ಕಾರ ಅವಧಿಗೂ ಮುನ್ನವೇ ಮೇ 16ರಿಂದ ತರಗತಿಗಳು ನಡೆಯಲಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಿದ್ಧತೆಗಳು ನಡೆದವು. ಗ್ರಾಮಗಳಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಜಾಥಾ ನಡೆಸಿ, ಶಾಲಾ ಆರಂಭ, ದಾಖಲಾತಿ ಆಂದೋಲನ ನಡೆಸಿದರು.

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ ಎರಡು ವರ್ಷಗಳಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿರುವುದನ್ನು ಸರಿದೂಗಿಸಲು ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ. ಮೇ 16ರಿಂದ 30 ರವರೆಗೆ ಮಕ್ಕಳಿಗೆ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸಲು ಫೂರಕವಾಗಿ ತರಗತಿಗಳು ನಡೆಯಲಿವೆ.

‘ಶಾಲೆಯನ್ನು ತಳಿರು, ತೋರಣ ದಿಂದ ಅಲಂಕೃತಗೊಳಿಸಿ ಸ್ವಾಗತಿಸಲು ಸಜ್ಜಾಗಿದ್ದೇವೆ. ಬಿಸಿಯೂಟದೊಂದಿಗೆ ಸಿಹಿ ನೀಡಲು ಸೂಚಿಸಲಾಗಿದೆ. ಗ್ರಾಮೀಣ, ಪಟ್ಟಣ ಪ್ರದೇಶದ ವಿದ್ಯಾರ್ಥಿ ಗಳು ನಿಗದಿತ ಸಮಯದಲ್ಲಿ ಶಾಲೆ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್ಆರ್‌ಟಿಸಿ ಅಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.

‘ಕಲಿಕಾ ಚೇತರಿಕೆ ಕಾರ್ಯಕ್ರಮ ಸಂಬಂಧ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಎರಡು ದಿನದ ತರಬೇತಿ ನೀಡಲಾಗಿದೆ. ಕಲಿಕಾ ಹಾಳೆ ಹಾಗೂ ಕಲಿಕಾ ಕೈಪಿಡಿಯನ್ನು ನೀಡಿದ್ದೇವೆ. ಶೈಕ್ಷಣಿಕ ವರ್ಷ ಯಾವ ಚಟುವಟಿಕೆ ಮಾಡಬೇಕು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳ ವಂತಾಗಲು ಧ್ಯಾನ, ಕ್ರೀಡೆ, ಮ್ಯೂಸಿಕ್‌, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘1 ರಿಂದ 10ನೇ ತರಗತಿಯ ಶೇ 50ರಷ್ಟು ಪುಸ್ತಕಗಳು ಬಂದಿವೆ. ಮುಂದಿನ ಹತ್ತು ದಿನಗಳಲ್ಲಿ ಎಲ್ಲ ಪುಸ್ತಕಗಳು ಸರಬರಾಜು ಆಗಲಿದೆ. ಹೀಗಾಗಿ ಪುಠ್ಯಪುಸ್ತಕಗಳ ಸಮಸ್ಯೆ ಆಗದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT