ಆಲೂರು: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ತುಂತುರು ಮಳೆಯಾಯಿತು.
ಭೂಮಿ ಮೇಲ್ಭಾಗ ತೇವವಾದರೂ ನೀರು ಹರಿಯುವಂತೆ ಮಳೆಯಾಗಲಿಲ್ಲ. ವಿಪರೀತ ಶೀತ ವಾತಾವರಣ ಸೃಷ್ಟಿಯಾಗಿದೆ.
ತುಂತುರು ಮಳೆಯಿಂದ ಕೃಷಿಗೆ ಯಾವುದೆ ತೊಂದರೆ ಆಗುವುದಿಲ್ಲ. ಮುಸುಕಿನ ಜೋಳಕ್ಕೆ ಈಗ ಯೂರಿಯ ಗೊಬ್ಬರ ಹಾಕಬಾರದು. ಹಾಕಿದರೆ ಬೆಳೆ ಸೊಗಸಾಗಿ ಬಂದರೂ, ಕಾಯಿಕೊರಕ ಹುಳು ಜಾಸ್ತಿಯಾಗಿ ಬೆಳೆ ನಾಶ ಮಾಡುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಡಿ. ಮನು ತಿಳಿಸಿದ್ದಾರೆ.
ಬುಧವಾರ ನಡೆದ ವಾರದ ಸಂತೆಗೆ ಬಂದ ಗ್ರಾಹಕರು ತುಂತುರು ಮಳೆಯಿಂದ ರೋಸಿ ಹೋದರು. ಒಂದೆಡೆ ಅಗತ್ಯ ವಸ್ತುಗಳು, ತರಕಾರಿ ಬೆಲೆ ಗಗನಕ್ಕೇರಿ ರುವುದರಿಂದ ಒಂದು ಕುಟುಂಬಕ್ಕೆ ವಾರಕ್ಕೆ ಸಾಕಾಗುವಷ್ಟು ತರಕಾರಿ ಕೊಳ್ಳಲು ಕನಿಷ್ಠ ₹1 ಸಾವಿರ ವ್ಯಯಿಸಬೇಕಾಯಿತು. ಟೊಮಟೊ ಕೆ.ಜಿ.ಗೆ ₹100, ಮುಳುಗಾಯಿ, ಮೂಲಂಗಿ, ಬೀನ್ಸ್ ₹80ರಿಂದ ರಿಂದ 100, ಈರುಳ್ಳಿ ಕೆ.ಜಿ.ಗೆ ₹25, ಬೆಳ್ಳುಳ್ಳಿ ಕೆ.ಜಿಗೆ ₹140 ರವರೆಗೆ ಮಾರಾಟವಾಯಿತು. ಮಳೆಯಾದ್ದರಿಂದ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು ಸಂತೆಗೆ ಬರಲು ಹಿಂದೇಟು ಹಾಕಿದರು.
ಶುಭ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡಯುತ್ತದೆ. ಆಷಾಢ ಮಾಸ ಪ್ರಾರಂಭ ಆಗಿರುವುದರಿಂದ ತರಕಾರಿ, ಸೊಪ್ಪು ಮಾರಾಟ ಕಡಿಮೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಇರ್ಫಾನ್ ರವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.