ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಬೀದಿನಾಯಿ ಉಪಟಳ ಜನತೆ ಹೈರಾಣು

ಮಹಿಳೆಯರು, ಮಕ್ಕಳು ಮನೆಯಿಂದ ಹೊರ ಹೋಗಲು ಭಯಪಡುವ ವಾತಾವರಣ
Last Updated 24 ಜನವರಿ 2022, 4:14 IST
ಅಕ್ಷರ ಗಾತ್ರ

ಹಾಸನ: ಕೆಲ ತಿಂಗಳ ಹಿಂದೆ ನಗರದಲ್ಲಿ ಹುಚ್ಚು ನಾಯಿ ಮೂರು ವರ್ಷದ ಬಾಲಕ, ವೈದ್ಯ ಸೇರಿ ಹಲವರ ಮೇಲೆರಗಿ ಗಾಯಗೊಳಿಸಿತು.ಎಲ್ಲರೂಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಆದರೆ, ಉದ್ರಿಕ್ತ ಜನರು ದೊಣ್ಣೆ, ಕಲ್ಲಿನಿಂದ ಹೊಡೆದು ಅದನ್ನು ಕೊಂದರು.

ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಿಡಾಡಿ ನಾಯಿಗಳ ಹಾವಳಿ ಮೀತಿ ಮೀರಿದ್ದು, ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಬೆಳಿಗ್ಗೆ, ಸಂಜೆ ವೇಳೆ ಮಕ್ಕಳು ಹಾಗೂ ವಯೋವೃದ್ಧರು ವಾಯುವಿವಾರಕ್ಕೆ ತೆರಳುವುದಕ್ಕೂ ಭಯ ಪಡುವ ಸ್ಥಿತಿಯಿದೆ. ಕೆಲವು ಹುಚ್ಚು ನಾಯಿಗಳು ಚಲಿಸುತ್ತಿರುವದ್ವಿಚಕ್ರ ವಾಹನಗಳನ್ನು ಅಟ್ಟಿಸಿಕೊಂಡು ಹೋಗಿರುವ ನಿದರ್ಶನಗಳಿವೆ.

ನಗರದ ಎನ್‌.ಆರ್.ವೃತ್ತ, ಬಂಬೂ ಬಜಾರ್‌, ಸಂತೇಪೇಟೆ, ವಿದ್ಯಾನಗರ,‌ ಶಾಂತಿನಗರ, ಕೆ.ಆರ್‌.ಪುರಂ, ಬಿ.ಎಂ ರಸ್ತೆಯ ಎಲ್ಲೆಂದರಲ್ಲಿ ಬೀದಿ ಬದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಕೆಎಸ್ಆರ್‌ಟಿಸಿ, ನಗರ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶ ಗಳಲ್ಲಿಯೂ ನಾಯಿಗಳ ಹಾವಳಿ ಮಿತಿಮೀರಿದೆ.

ಹಾಸನ ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, ಅನೇಕ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಇಂದಿಗೂ ಕಾಡುತ್ತಿದೆ. ಜಿಲ್ಲಾ ಕ್ರೀಡಾಂಗಣ, ಹೈಸ್ಕೂಲ್‌ ಮೈದಾನ ರಸ್ತೆ, ಮಟನ್‌ ಮಾರ್ಕೆಟ್‌, ರಾಜಕುಮಾರ್‌ ನಗರ 80 ಅಡಿ ರಸ್ತೆ, ಕೆ.ಆರ್‌ ಪುರಂ, ಬೇಲೂರು ಬೈಪಾಸ್‌ ರಸ್ತೆ, ಸಾಲಗಾಮೆ ರಸ್ತೆ,ಲೋಕೋಪಯೋಗಿ ಇಲಾಖೆ ಕ್ವಾಟ್ರಸ್‌, ವಿದ್ಯಾನಗರ ಹೀಗೆ ಎಲ್ಲೆಂದರಲ್ಲಿ ನಾಯಿಗಳು ರಸ್ತೆಮಧ್ಯದಲ್ಲಿಯೇ ಮಲಗುತ್ತವೆ.

ಮಾಂಸದಂಗಡಿ ಇರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ. ಅಲ್ಲದೇ ಕೆಲ ಅಂಗಡಿಯವರು ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದನಾಯಿಗಳು ಅವುಗ ಳನ್ನು ಬೀದಿಗಳಲ್ಲಿ ಎಳೆದುಕೊಂಡು ತರುತ್ತವೆ.

‌ರಸ್ತೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ಬೀದಿನಾಯಿಗಳು ರಾತ್ರಿ ವೇಳೆ ಬೊಗಳುವಿಕೆಯು ಬಡಾವಣೆ ನಿವಾಸಿಗಳ ನಿದ್ದೆಗೆಡಿಸುತ್ತಿವೆ. ಶಾಲಾಮಕ್ಕಳು, ವೃದ್ಧರು, ಮಹಿಳೆಯರ ಮೇಲೆ ದಾಳಿ ಮಾಡುತ್ತಿವೆ.

ರಾತ್ರಿ ವೇಳೆ ನಾಯಿಗಳು ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋಗು ತ್ತವೆ. ಇದರಿಂದ ಗಾಬರಿಗೊಂಡ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಅನೇಕ ಸಂದರ್ಭ ದಲ್ಲಿಬೀದಿ ನಾಯಿಗಳು ವಾಹನಗಳಿಗೆ ಅಡ್ಡಬಂದು ಅಪಘಾತಗಳು ಸಂಭವಿಸಿವೆ.

ಬೀದಿ ನಾಯಿಗಳ ಹಾವಳಿ ಬಗ್ಗೆ ಶಾಸಕ ಎಚ್‌.ಡಿ. ರೇವಣ್ಣ ಇತ್ತೀಚೆಗೆ ವಿಷಯ ಪ್ರಸ್ತಾಪಿಸಿ, ಹಾಸನ ನಗರದಲ್ಲಿ ಮಾತ್ರವಲ್ಲದೇ ಜಿಲ್ಲೆಯ ಅನೇಕ ಕಡೆ ಬೀದಿ ನಾಯಿಗಳ ಸಮಸ್ಯೆ ದಿನೇ ದಿನೇವಿಪರೀತವಾಗುತ್ತಿದ್ದು, ಅವಗಳನ್ನು ಹಿಡಿದು ಕಾಡಿಗೆ ಅಥವಾ ಹಳ್ಳಿಗಳಿಗೆ ಬಿಡಿ ಎಂದು ಸಲಹೆನೀಡಿದ್ದರು.

ನಾಯಿಗಳ ಉಪಟಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ನಗರಸಭೆಗೆ ದೂರು ನೀಡಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹಾಸನ ನಗರಸಭೆ ವ್ಯಾಪ್ತಿಯವಾರ್ಡ್‌ಗಳಲ್ಲಿ ಶ್ವಾನಗಳನ್ನು ಸೆರೆ ಹಿಡಿದು ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಮಾಡಲಾಗುತ್ತಿದೆ. ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ಅವು ಇದ್ದ ಸ್ಥಳದಲ್ಲಿಯೇ ಬಿಡಲಾಗಿದೆ.

ನಗರಸಭೆ 35 ವಾರ್ಡ್‌ ವ್ಯಾಪ್ತಿಯಲ್ಲಿ ಅಂದಾಜು ನಾಲ್ಕು ಸಾವಿರ ನಾಯಿಗಳಿವೆ. 2018 ರಿಂದಈವರೆಗೆ ಸೆರೆ ಹಿಡಿದಿರುವುದು ಕೇವಲ 300 ರಿಂದ 400 ಮಾತ್ರ. ಈ ಬಾರಿ ಒಂದು ಸಾವಿರಶ್ವಾನಗಳನ್ನು ಸೆರೆ ಜತೆಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಕಾನೂನು ಪ್ರಕಾರ ಮಾಡಲುಯೋಜನೆ ರೂಪಿಸಿದೆ.

‘ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಮಾಡಲಾಗುತ್ತಿದೆ. ಬೀದಿ ನಾಯಿಗಳು ಕಚ್ಚಿದರೆ ಜಿಲ್ಲೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಜಿಲ್ಲಾ ಆಸ್ಪತ್ರೆಯಲ್ಲಿರೇಬಿಸಿ ಲಸಿಕೆ ದಾಸ್ತಾನು ಇದೆ. ಬೀದಿ ನಾಯಿಗಳ ದಾಳಿಗೆ ಒಳಗಾದವರಿಗೆ ತ್ವರಿತವಾಗಿ ಚಿಕಿತ್ಸೆಕೊಡಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ಮಾಹಿತಿ ನೀಡಿದರು.

ಆಲೂರು ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇವುಗಳಕಾಟದಿಂದ ಜನಸಾಮಾನ್ಯರು, ಮಕ್ಕಳು ತಿರು ಗಾಡಲು ಭಯಪಡುವಂತಾಗಿದೆ. ಅನೇಕ ಮಕ್ಕಳುನಾಯಿ ದಾಳಿಗೆ ಒಳಗಾಗಿವೆ.

ಕೆಲ ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳನ್ನು ಹಿಡಿದು ಹೊರಗೆ ಬಿಡಲಾಗಿತ್ತು. ನಂತರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

‘ನಾಯಿ ಕಚ್ಚಿದರೆ ಔಷಧಿ ಕೊರತೆ ಇಲ್ಲ. ದಿನದ 24 ಗಂಟೆಯೂ ಔಷಧ ಲಭ್ಯವಿದೆ’ ಎಂದುತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ತಿಳಿಸಿದರು.

‘ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಬೀದಿ ನಾಯಿಗಳಿವೆ’ ಎಂದು ಪಶುವೈದ್ಯ ಡಾ.ರವೀಂದ್ರನಾಥ್ ಮಾಹಿತಿ ನೀಡಿದರು.

ಅರಕಲಗೂಡು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಮಕ್ಕಳು ಹಾಗೂ ಹಿರಿಯರಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತವೆ.

‘ಬೀದಿ ನಾಯಿಗಳ ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ಗಂಭೀರವಾದ ಪ್ರಯತ್ನಗಳುನಡೆದಿಲ್ಲ. ಅಕ್ಕ ಪಕ್ಕದ ಪಟ್ಟಣಗಳಿಂದ ರಾತ್ರಿ ವೇಳೆ ನಾಯಿಗಳನ್ನು ತಂದು ಬಿಟ್ಟು ಹೋಗು ತ್ತಿರುವುದುಇವುಗಳ ಹಾವಳಿ ಹೆಚ್ಚಲು ಕಾರಣವಾಗುತ್ತಿದೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿಮುಖ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.

‘ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯವಿದೆ. ಇಲ್ಲದಿದ್ದರೂ ಹೊರಗಿನಿಂದ ತರಿಸಿ ಕೊಡಲು ಅವಕಾಶವಿದೆ. ₹ 370 ಬೆಲೆಯ ಚುಚ್ಚುಮದ್ದಿಗೆ ₹100 ಮಾತ್ರ ಪಡೆಯಲಾಗುವುದು. ಉಳಿದ ಹಣವನ್ನು ಸರ್ಕಾರ ಸಹಾಯ ಧನ ನೀಡಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ತಿಳಿಸಿದರು.

ಪಟ್ಟಣ ಪಂಚಾಯಿತಿ ಸರ್ಕಾರಿ ಆಸ್ಪತ್ರೆಗೆ ಚುಚ್ಚುಮದ್ದು ಖರೀದಿಗೆ ಹಣ ಒದಗಿಸುತ್ತದೆ. ಪಟ್ಟಣವ್ಯಾಪ್ತಿಯಲ್ಲಿ ನಾಯಿ ಕಡಿತಕ್ಕೆ ಒಳಗಾದವರು ಪಟ್ಟಣ ಪಂಚಾಯಿತಿಯಿಂದ ಪತ್ರ ಪಡೆದು ಆಸ್ಪತ್ರೆಗೆನೀಡಿದರೆ ಉಚಿತವಾಗಿ ಚುಚ್ಚುಮದ್ದು ನೀಡುವ ವ್ಯವಸ್ಥೆ ಇದೆ.

ಚನ್ನರಾಯಪಟ್ಟಣದಲ್ಲಿ ಅಂದಾಜು ಎರಡು ಸಾವಿರ‌ ಬೀದಿ ನಾಯಿಗ ಳಿವೆ. ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುತ್ತವೆ. ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸುವಾಗ ಬೀದಿಯಲ್ಲಿ ನಾಯಿಗಳಿದ್ದರೆ ಎಚ್ಚರದಿಂದ ಸಂಚರಿಸ ಬೇಕಿದೆ. ಕೆಲವು ‌ಕಡೆ ದ್ವಿಚಕ್ರ ವಾಹನ‌ಗಳ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ.

ಹಳೇಬೀಡು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಆಗಾಗ್ಗೆ ಬೀದಿ ನಾಯಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗುತ್ತದೆ. ಆದರೂ ನಾಗರಿಕರು ಬೀದಿ ನಾಯಿಗಳ ಉಪಟಳ ದಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. ಹೊಯ್ಸಳ ಬಡಾವಣೆ, ಅಂಬೆಡ್ಕರ್ ನಗರ, ಹಳೇ ಸಂತೆ ಬೀದಿ, ಬಸ್ತಿಹಳ್ಳಿ, ಕಲ್ಮಠ ಬೀದಿ, ಜನತಾ ಕಾಲೋನಿಹಾಗೂ ಕರಿಯಮ್ಮ ಬೀದಿಗಳಲ್ಲಿ ನಾಯಿಗಳು ತಂಡೋಪ ತಂಡವಾಗಿ ಪ್ರತ್ಯಕ್ಷ ವಾಗುತ್ತಿರುತ್ತವೆ.

‘ನಾಯಿ ಸೆರೆಹಿಡಿದು ಕಾಡಿಗೆ ಸಾಗಿಸದೆ ಪಟ್ಟಣದ ಹೊರಗೆ ಬಿಡಲಾಗುತ್ತದೆ. ಹೀಗಾಗಿ ನಾಯಿ ಗಳನ್ನು ಹೊರ ಸಾಗಿಸಿದರೂ ಮತ್ತೆ ಪ್ರತ್ಯಕ್ಷವಾಗುತ್ತಿವೆ. ಪಂಚಾಯಿತಿ ಸಿಬ್ಬಂದಿ ದಟ್ಟ ಕಾಡುಗಳಿಗೆ ಅವುಗಳನ್ನುಸಾಗಿಸಬೇಕು’ ಎಂದು ವಿದ್ಯಾರ್ಥಿ ಜೀವನ್ ಹೇಳುತ್ತಾರೆ.

‌ಹಿರೀಸಾವೆ ಹೋಬಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ವರ್ಷಕ್ಕಿಂತ, ವರ್ಷಕ್ಕೆ ಹೆಚ್ಚಾಗಿದೆ. ಸಾರ್ವಜನಿಕರ ದಿನನಿತ್ಯದ ಜೀವನಕ್ಕೆ ತೊಂದರೆ ಉಂಟುಮಾಡುತ್ತಿವೆ.

‘ಹಿರೀಸಾವೆ ಆಸ್ಪತ್ರೆಗೆ ವಾರಕ್ಕೆ 10 ಕ್ಕೂ ಹೆಚ್ಚು ಜನರು ನಾಯಿಗಳ ಕಡಿತಕ್ಕೆ ಒಳಗಾದವರು ಚಿಕಿತ್ಸೆಪಡೆಯುತ್ತಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ಹೊಂದಿರುವವರಿಗೆ ಉಚಿತವಾಗಿ ಹಾಗೂ ಇತರರಿಗೆ ₹ 50 ಅಥವಾ ₹ 100 ಪಡೆದುಚುಚ್ಚುಮದ್ದು ನೀಡಲಾಗುತ್ತಿದ್ದೆ. ಮುಂದಿನ ದಿನಗಳಲ್ಲಿ ಬೀದಿನಾಯಿ ನಿಯಂತ್ರಣದ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿಅಧಿಕಾರಿ ದರ್ಶನ್.

‘ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗು ವುದು. ಇದಕ್ಕಾಗಿ ಸರ್ಕಾರೇತರ ಸಂಸ್ಥೆಗಳಿವೆ. ಸದ್ಯದಲ್ಲಿಯೇ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುವುದು’ ಎಂದು ಚನ್ನರಾಯಪಟ್ಟಣಪುರಸಭೆ ಮುಖ್ಯಾಧಿಕಾರಿಎಚ್‌.ಟಿ ಕೃಷ್ಣಮೂರ್ತಿ ಹೇಳಿದರು.

‘ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ಮುಂಬರುವ ಆಡಳಿತ ಸಭೆಯಲ್ಲಿ ವಿಷಯ ಮಂಡನೆ ಮಾಡಲಾಗುವುದು. ನಾಯಿ ಹಿಡಿಯುವವರು ಕೇರಳ ರಾಜ್ಯದಿಂದಬರಬೇಕು. ಸಾರ್ವಜನಿಕರ ರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT