ಬುಧವಾರ, ಡಿಸೆಂಬರ್ 8, 2021
28 °C
ಪುರಸಭೆ ಕೆಲ ಅಧಿಕಾರಿ, ಸಿಬ್ಬಂದಿಯಿಂದ ಭ್ರಷ್ಟಾಚಾರ: ಆರೋಪ

ಕಾನೂನು ಕ್ರಮ: ಎ.ಸಿಗೆ ಶಾಸಕ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ‘ಪುರಸಭೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ಸಾರ್ವಜನಿಕರ ಪ್ರತಿ ಕೆಲಸಕ್ಕೂ ಲಂಚ, ಅಕ್ರಮ ಭೂ ವ್ಯವಹಾರ ಪ್ರಕರಣಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಚ್‌.ಕೆ.ಕುಮಾಸ್ವಾಮಿ ಉಪವಿಭಾಗಾಧಿಕಾರಿ ಎಂ.ಗಿರೀಶ್‌ ನಂದನ್‌ ಅವರಿಗೆ ಸೂಚಿಸಿದರು.

ಇಲ್ಲಿಯ ಪುರಸಭಾ ಕಾರ್ಯಾಲಯದಲ್ಲಿ ಸೋಮವಾರ ಪುರಸಭಾ ಸದಸ್ಯರು ಆಡಳಿತ ಅಧಿಕಾರಿ, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಪಟ್ಟಣದ ಅಭಿವೃದ್ಧಿ ಬಗ್ಗೆ ನಡೆದ ತುರ್ತು ಸಭೆಯಲ್ಲಿ ಕ್ರಮಕ್ಕೆ ತಾಕೀತು ಮಾಡಿದರು.

‘ಮುಖ್ಯಾಧಿಕಾರಿ ಸೇರಿದಂತೆ ಎಲ್ಲರ ಮೇಲೂ ದೂರುಗಳಿವೆ. ಪಟ್ಟಣದ ಅಭಿವೃದ್ಧಿ ಬಗ್ಗೆ ನಿಮಗ್ಯಾರಿಗೂ ಇಚ್ಛಾಶಕ್ತಿ ಇಲ್ಲ. ಹೇಳುವವರು ಕೇಳುವವರೂ ಯಾರೂ ಇಲ್ಲ ಎಂದುಕೊಂಡು ಆಡಿದ್ದೇ ಆಟವಾಗಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹಳೆ ಬಸ್ ನಿಲ್ದಾಣ ಮುಂಭಾಗ ರಸ್ತೆಬದಿ  ಪ್ಲಾಸ್ಟಿಕ್‌ ಹಾಕಿಕೊಂಡು ತರಕಾರಿ, ಹಣ್ಣು ಬೇಕಾದಂತೆ ವ್ಯಾಪಾರ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿಗಳೇ ಏನ್‌ ಕಣ್ಣುಮುಚ್ಚಿ ಕುಳಿತುಕೊಂಡಿದ್ದೀರಾ? ತಕ್ಷಣವೇ ಎಲ್ಲವನ್ನೂ ತೆರವುಗೊಳಿಸಬೇಕು’ ಎಂದು ಸೂಚನೆ ನೀಡಿದರು.

‘ಪಟ್ಟಣದ ಸುಭಾಷ್‌ ಕ್ರೀಡಾಂಗಣದಲ್ಲಿ ನೂರಾರು ಲೋಡ್‌ ಕಸ ದಾಸ್ತಾನು ಮಾಡಲಾಗಿದೆ. ಆ ಕಸ ಮಳೆ ನೀರಿನಲ್ಲಿ ಕೊಳೆತು ವಾಸನೆ ಬರುತ್ತಿದೆ. ಅಲ್ಲಿಯ ನಿವಾಸಿಗಳು ಪ್ರತಿ ಕ್ಷಣವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಆ ಕಸವನ್ನು ತೆರವುಗೊಳಿಸಬೇಕು’ ಎಂದು ಪುರಸಭಾ ಸದಸ್ಯ ಉಮೇಶ್‌ ಆಚಾರ್‌ ಹಾಗೂ ಕೆಲ ಸದಸ್ಯರು ಆಗ್ರಹಿಸಿದರು.

‘ಒಂದು ದಶಕದಿಂದ ಇರುವ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ರೂಪಿಸಲಾಗುವುದು. ಹಳೆ ಬಸ್ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು’ ಎಂದು ಶಾಸಕರು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌ ಮಾತನಾಡಿ, ‘ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಜಾಗವೊಂದರಲ್ಲಿ ಮನೆ ಇದೆ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ 94ಸಿ ಅಡಿಯಲ್ಲಿ ಭೂಮಿಯನ್ನು ಅಕ್ರಮ ಮಂಜೂರು ಮಾಡಿದ ಪ್ರಕರಣವೊಂದರ ದಾಖಲೆಯನ್ನು ಆಡಳಿತ ಅಧಿಕಾರಿಯಾಗಿ ಕೇಳಿ ಎಷ್ಟು ದಿನಗಳಾದರೂ ಇನ್ನೂ ಯಾಕೆ ನೀಡಿಲ್ಲ. ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ದಾಖಲೆ ಸಹಿತ ಹಲವು ದೂರುಗಳಿದ್ದು ಎಲ್ಲವನ್ನೂ ಪರಿಶೀಲಿಸಿ ತಪ್ಪಿತಸ್ಥರನ್ನು ಖಂಡಿತ ಅಮಾನತುಗೊಳಿಸಲಾಗುವುದು’ ಎಂದರು.

ಕುಡಿಯುವ ನೀರಿನ ಸಮಸ್ಯೆ, ಶುದ್ಧೀಕರಿಸದೆ ನೀರು ಪೂರೈಕೆ, ಕಸ ವಿಲೇವಾರಿ ಸಮಸ್ಯೆ, ತಡೆಗೋಡೆ ನಿರ್ಮಾಣ ಬೇಡಿಕೆ, ಕಾಂಕ್ರೀಟ್‌ ರಸ್ತೆ ಕಳಪೆ ಕಾಮಗಾರಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪುರಸಭಾ ಸದಸ್ಯರು ಶಾಸಕ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು