ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣದ ವಿರುದ್ಧ ದೇಶವ್ಯಾಪಿ ಹೋರಾಟ

ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಘೋಷಣೆ
Last Updated 8 ಆಗಸ್ಟ್ 2019, 12:12 IST
ಅಕ್ಷರ ಗಾತ್ರ

ಹಾಸನ: ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಆ. 20ರ ನಂತರ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ಸಂಘಟಿಸಲಾಗುವುದು ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಯ ವಿಷಯವನ್ನು ಮುಂದಿಟ್ಟುಕೊಂಡು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, ಈಗ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ತಯಾರಿಕಾ ಉದ್ದಿಮೆಗಳನ್ನೇ ಖಾಸಗೀಕರಣ ಮಾಡಲು ಮುಂದಾಗಿದೆ. ಈ ನಡೆ ದೇಶದ ಭದ್ರತೆಯ ದೃಷ್ಟಿಯಿಂದ ಗಂಡಾಂತರಕಾರಿಯಾಗಲಿದೆ ಎಂದು ಎಚ್ಚರಿಸಿದರು.

ದೇಶಿ ಮತ್ತು ವಿದೇಶಿ ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡಲು, ಅವುಗಳ ವ್ಯವಹಾರಗಳು ಸುಲಲಿತವಾಗಿ ನಡೆಯುವಂತೆ ಮಾಡಲು ಹಾಗೂ ನಿರ್ದಯ ಶೋಷಣೆಗೆ ಅವಕಾಶ ಮಾಡಿಕೊಡಲು ಸರ್ಕಾರವು ಎಲ್ಲಾ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಅಂತರ್ಗತಗೊಳಿಸಲು ನಿರ್ಧರಿಸಿದೆ. ಕಾರ್ಮಿಕ ಕಾನೂನುಗಳ ತಿದ್ದುಪಡಿಯಲ್ಲಿ ‘ದುಡಿಯುವ ಅವಧಿ’ ಮತ್ತು ‘ವೇತನ’ ಎಂಬ ಎರಡು ಪ್ರಮುಖ ಅಂಶಗಳ ಉಲ್ಲೇಖವೇ ಇಲ್ಲ. ಇದರಿಂದ ಕಾರ್ಮಿಕರ ಶೋಷಣೆ ಹೆಚ್ಚಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿರುವ ಪ್ರಮುಖ ಸಾರ್ವಜನಿಕ ಉದ್ದಿಮೆಗಳಾದ - ರಕ್ಷಣೆ, ರೈಲ್ವೆ, ಉಕ್ಕು ಮತ್ತು ವಿದ್ಯುತ್ ವಲಯಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ಬೆಲೆಗೆ ಮಾರಲು ಈಗಿನ ಮೋದಿ ಆಡಳಿತ ಅತ್ಯಾತುರದಲ್ಲಿದೆ. ಆ ಮೂಲಕ ರಾಷ್ಟ್ರೀಯ ಸಾರ್ವಜನಿಕ ಆಸ್ತಿಗಳನ್ನು ವೈಯಕ್ತಿಕ ವ್ಯಾಪಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಉತ್ಸುಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದ ಎಚ್‍ಎಎಲ್, ಬಿಇಎಂಎಲ್ ಮತ್ತು ಭದ್ರವಾತಿ ವಿಶ್ವೇಶರಾಯ ಉಕ್ಕು ಕಾರ್ಖಾನೆ ಖಾಸಗೀಕರಣ ವಿರುದ್ಧವೂ ಹೋರಾಟ ರೂಪಿಸಲಾಗುವುದು. ರಾಷ್ಟ್ರೀಯ ಆರ್ಥಿಕತೆ, ಕಾರ್ಮಿಕ ಹಕ್ಕುಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಎದುರಿಸಲು ಮುಂದೆ ಕೈಗೊಳ್ಳಬೇಕಾದ ಸ್ವತಂತ್ರ ಮತ್ತು ಜಂಟಿ ಕಾರ್ಯಾಚರಣೆಗಳ ಕುರಿತು ಸಿಐಟಿಯು ಸಾಮಾನ್ಯ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಸಭೆಯಲ್ಲಿ 35 ವಿವಿಧ ವರದಿಗಳ ಮಂಡನೆಯಾಗಿದ್ದು, ಅವುಗಳ ಕುರಿತ ಚರ್ಚೆ ಮುಂದುವರೆದಿದೆ. ಒಟ್ಟ ನಿರ್ಣಯಗಳನ್ನು ಆ.10 ರಂದು ನಡೆಯುವ ಬಹಿರಂಗ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಗಾರ್ಮೆಂಟ್ ಉದ್ದಿಮೆಗಳಲ್ಲಿ ಕಾರ್ಮಿಕರ ದುಡಿಯುವ ಅವಧಿ ಮತ್ತು ವೇತನ ಕುರಿತು ಆರು ತಿಂಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ನಾಲ್ಕು ತಿಂಗಳು ಕಳೆದಿವೆ. ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಹಾಸನದ ಹಿಮತ್‌ ಸಿಂಗ್‌ ಕಾ ಕಾರ್ಖಾನೆಯಲ್ಲಿ ಕಾರ್ಮಿಕರು ರಂಪಾಟ ನಡೆಸಲು ಸರ್ಕಾರದ ವಿಳಂಬ ನೀತಿಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT