ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ಜಾತ್ಯತೀತ ತತ್ವಕ್ಕೆ ವಿರುದ್ಧ: ಶಾಸಕ
Last Updated 23 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅರಸೀಕೆರೆ: ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಧರ್ಮವನ್ನು ಹೊರಗಿಟ್ಟು ಮಸೂದೆಯನ್ನು ಮಂಡಿಸಿರುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಈ ಮಸೂದೆಯನ್ನು ಪುನರ್ ಪರಿಶೀಲಿಸಿ ಜಾರಿಗೆ ತರಬೇಕು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಆಗ್ರಹಿಸಿದರು.

ನಗರದ ಹುಳಿಯಾರು ರಸ್ತೆಯಲ್ಲಿರುವ ಜಾಮೀಯಾ ಮಸೀದಿಯ ಮುಂಭಾಗ ನಗರದ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ದೇಶದ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿರುವುದಕ್ಕೆ ಬ್ರಿಟಿಷರೇ ನೇರ ಹೊಣೆ.ಅವರ ಒಡೆದು ಆಳುವ ನೀತಿಯಿಂದ ಇಡೀ ದೇಶ ಸಮಸ್ಯೆಯಿಂದ ನಲುಗಿದ್ದು ಇನ್ನೂ ಬಗೆಹರಿಸಿಕೊಳ್ಳಲಾಗುತ್ತಿಲ್. ಮಹಾತ್ಮ ಗಾಂಧಿಗೆ ದೇಶ ಇಬ್ಭಾಗವಾಗುವುದು ಇಷ್ಟವಿರಲಿಲ್ಲ, ನರೇಂದ್ರ ಮೋದಿಗೆ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದರೆ ಮುಸ್ಲಿಂ ಧರ್ಮದವರನ್ನು ಹೊರಗಿಟ್ಟು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪುನರ್ ಪರಿಶೀಲಿಸಿ ಯಾವ ಧರ್ಮಕ್ಕೂ ಅನ್ಯಾಯವಾಗದ ರೀತಿಯಲ್ಲಿ ಪುನರ್ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಹಾಸನದ ಅಂಜುಮನ್ ಮುಸ್ಲಿಂ ಧರ್ಮಗುರು ಮೌಲಾನಾ ಅನ್ವರ್ ಮಾತನಾಡಿ, ‘ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದವರೆಲ್ಲರೂ ಭ್ರಾತೃತ್ವ ಭಾವನೆಯಿಂದ ಬದುಕುತ್ತಿದ್ದೇವೆ. ಭಾರತೀಯ ಪ್ರಜೆಗಳಾದ ನಾವೆಲ್ಲರೂ ಮತ ಚಲಾಯಿಸಿ ಚುನಾಯಿಸಿ ಕಳುಹಿಸಿರುವ ನಮ್ಮದೆಯಾದ ಕೇಂದ್ರ ಸರ್ಕಾರ ಜಾತ್ಯತೀತ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದು ಖಂಡನೀಯ’ ಎಂದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಮುಖಂಡರು ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ಗೆ ಜಿಂದಾಬಾದ್ ಎಂದು ಜಯಘೋಷ ಕೂಗಿದರು.

ಮುಸ್ಲಿಂ ಧರ್ಮಗಗುರುಗಳು, ನಗರಸಭೆ ಸದಸ್ಯ ಸಮೀವುಲ್ಲಾ, ಮಾಜಿ ಸದಸ್ಯ ಜಮೀಲ್ ಅಹ್ಮದ್, ಜೆಡಿಎಸ್ ಮುಖಂಡ ಸಿಕಂದರ್, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ಅರಸೀಕೆರೆ ಡಿವೈಎಸ್ಪಿ ನಾಗೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT