ಶುಕ್ರವಾರ, ಸೆಪ್ಟೆಂಬರ್ 17, 2021
28 °C
ದೊಡ್ಡಕಾಡನೂರು ಕಾವೇರಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

ಬ್ಯಾಂಕ್ ವ್ಯವಸ್ಥಾಪಕರ ನೀತಿ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯನ್ನು ಸರಿಯಾಗಿ ಜಾರಿ ಮಾಡದೇ ನಿರ್ಲಕ್ಷ್ಯ ವಹಿಸಿರುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಹೊಳೆನರಸೀಪುರ ತಾಲ್ಲೂಕು ದೊಡ್ಡಕಾಡನೂರು ಕಾವೇರಿ ಗ್ರಾಮೀಣ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಮಂಜುನಾಥ್ ಕಳೆದ ಮೂರು ವರ್ಷಗಳಿಂದ ಈ ಗ್ರಾಮದ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ವ್ಯವಹಾರಕ್ಕೆ ಹೋಗುವ ಸಾರ್ವಜನಿಕರ ಜೊತೆ ಸರಿಯಾಗಿ ವರ್ತಿಸುವುದಿಲ್ಲ. ಬಡವರು ಮತ್ತು ದಲಿತರ ವಿರೋಧಿಯಾಗಿರುವ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

2015-16, 2017-18 ಹಾಗೂ 2018-19 ನೇ ಸಾಲಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ದೊಡ್ಡಕಾಡನೂರು ಸುತ್ತಲಿನ ಗ್ರಾಮಗಳಾದ ದಾಳಗೌಡನಹಳ್ಳಿ, ಹಿಂದಲಹಳ್ಳಿ, ಕಬ್ಬೂರು, ಬಾಚನಹಳ್ಳಿ, ಹಿರಿತಳಾಲು, ನಗರನಹಳ್ಳಿ, ರಂಗೇನಹಳ್ಳಿ, ರಾಗೇಹಳ್ಳಿಕಾವಲು, ನೆಗ್ಗಲಹಳ್ಳಿ, ಮೆಣಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಬಡವರು ಮತ್ತು ದಲಿತರು, ಇತರೆ ಮೇಲ್ವರ್ಗದವರ ಬಡವರಿಗೆ ಪಶುಭಾಗ್ಯ, ಅಮೃತ ಯೋಜನೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕುರಿ, ಹಂದಿ, ಹಸು ಸಾಕಲು ಸಂಬಂಧಿಸಿದ ಇಲಾಖೆ ವತಿಯಿಂದ 95ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ನೀಡಬೇಕೆಂದು ದೊಡ್ಡಕಾಡನೂರು ಬ್ಯಾಂಕಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.

ಫಲಾನುಭವಿಗಳಿಗೆ ನೀಡುವ ಸಹಾಯಧನ ₹ 34.39 ಲಕ್ಷ ಬ್ಯಾಂಕಿನಲ್ಲಿತ್ತು. ಆದರೆ, ಕಳೆದ ಮಾರ್ಚ್‌ ತಿಂಗಳಲ್ಲಿ ಸಹಾಯಧನವನ್ನು ವಾಪಸ್ ಕಳುಹಿಸಿರುವ ವ್ಯವಸ್ಥಾಪಕರ ಮಂಜುನಾಥ್ ನಡೆ ಸರಿಯಲ್ಲ. ಹಸುಗಳನ್ನು ಸಾಕಲು ರೈತರಿಗೆ ಕೊಟ್ಟಿಗೆ ಇಲ್ಲ ಎಂದು ಸ್ಥಳ ಪರಿಶೀಲನೆ ಮಾಡದೇ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

ಕೂಡಲೇ ಸಹಾಯಧನ ವಾಪಸ್ ತರಿಸಿ 95 ಫಲಾನುಭವಿಗಳಿಗೆ ಸಾಲ ನೀಡಲು ನಿರ್ದೇಶನ ನೀಡಬೇಕು. ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ವ್ಯವಸ್ಥಾಪಕರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು  ಒತ್ತಾಯಿಸಿದರು.

ದಲಿತ ಸಂಘದ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಮುಖಂಡರಾದ ಎಚ್.ಕೆ. ಸಂದೇಶ್, ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಟಿ.ಆರ್. ವಿಜಯ ಕುಮಾರ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.