ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಫ್ರಾನ್ಸಿಸ್‌ ಕ್ಸೇವಿಯರ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕ್ರೈಸ್ತ ಮುಖಂಡರು, ಸಾರ್ವಜನಿಕರ ಧರಣಿ
Last Updated 29 ಸೆಪ್ಟೆಂಬರ್ 2020, 15:06 IST
ಅಕ್ಷರ ಗಾತ್ರ

ಹಾಸನ: ‘ಜಿಲ್ಲೆಯ ಚರ್ಚ್‍ಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ಸಮಾಜದ ಸ್ವಾಸ್ಥ್ಯಹದಗೆಡಿಸುತ್ತಿರುವ ಫ್ರಾನ್ಸಿಸ್ ಕ್ಸೇವಿಯರ್‌ ಎಂಬಾತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕ್ರೈಸ್ತ ಮುಖಂಡರು ಹಾಗೂ ಸಾರ್ವಜನಿಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೂರಕ್ಕೂ ಅಧಿಕ ಪ್ರತಿಭಟನಕಾರರು ಕ್ಸೇವಿಯರ್ ವಿರುದ್ಧ ಧಿಕ್ಕಾರ ಕೂಗಿದರು.

ಜಿಲ್ಲಾ ಕ್ರೈಸ್ತ ಧರ್ಮ ಕೇಂದ್ರದ ಪ್ರಧಾನ ಗುರು ರೆವರೆಂಡ್ ರೋನಿ ಕರಡೋಜಾ ಮಾತನಾಡಿ, ‘ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಜಿಲ್ಲೆಯ ಏಳು ಚರ್ಚ್‍ಗಳ ಅಭಿವೃದ್ಧಿಗೆ ಇದುವರೆಗೆ ₹7.20 ಕೋಟಿ ಮಂಜೂರಾಗಿದ್ದು, ₹6.11 ಕೋಟಿ ಬಿಡುಗಡೆಯಾಗಿದೆ. ಸರ್ಕಾರ ನೀಡಿದ ಎಲ್ಲ ಹಣವನ್ನು ಕ್ರಮಬದ್ಧವಾಗಿ ವಿನಿಯೋಗ ಮಾಡಲಾಗಿದೆ. ಆದರೆ ಫ್ರಾನ್ಸಿಸ್ ಕ್ಸೇವಿಯರ್ ₹15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಚರ್ಚ್‍ನ ಪಾದ್ರಿ ಹಾಗೂ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ’ ಎಂದರು.

‘ಉಪವಿಭಾಗಾಧಿಕಾರಿ ನವೀನ್ ಭಟ್ ನೇತೃತ್ವದಲ್ಲಿ ಅವ್ಯವಹಾರ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದರೂ ಫ್ರಾನ್ಸಿಸ್ ತಾನೇ ತನಿಖಾ ಅಧಿಕಾರಿಯಂತೆ ಚರ್ಚ್‍ಗಳಿಗೆ ಭೇಟಿ ನೀಡಿ, ಛಾಯಾಚಿತ್ರ ತೆಗೆದು, ಅಲ್ಲಿನ ಪಾದ್ರಿಹಾಗೂ ಸಿಸ್ಟರ್ಸ್‍ಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಸ್ತ ಮುಖಂಡರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.

‌‘ಚರ್ಚ್ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ತನಗೂ ಪಾಲು ನೀಡಬೇಕೆಂದು ಫ್ರಾನ್ಸಿಸ್ ಬೇಡಿಕೆಯಿಟ್ಟಿದ್ದರು. ಇದಕ್ಕೆ ಸಮುದಾಯದ ನಾಯಕರು ಒಪ್ಪದ ಹಿನ್ನೆಲೆಯಲ್ಲಿ ಈ ರೀತಿ ಬ್ಲಾಕ್‌ ಮೇಲ್ ಮಾಡುತ್ತಿದ್ದಾರೆ. ಇವರಿಂದ ಚರ್ಚ್‍ಗಳಿಗೆ ಕೆಟ್ಟ ಹೆಸರು ಬಂದಿದ್ದು, ಕೂಡಲೇ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಶೆಟ್ಟಿಹಳ್ಳಿ ಚರ್ಚ್‍ನ ಡೇವಿಡ್, ಸಕಲೇಶಪುರದ ಚಾರ್ಲಿ ಪೆರೆರಾ, ಥಾಮಸ್, ಚಾಲ್ಸ್ ಫೇಂ, ಮರಿಜೋಸೆಫ್ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT