ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡಾ ವಿರುದ್ಧ ಆಪ್‌ ಪ್ರತಿಭಟನೆ

ನಿವೇಶನಕ್ಕೆ ಮುಂಗಡ ಹಣ: ಆಕ್ರೋಶ
Last Updated 24 ಮೇ 2022, 15:31 IST
ಅಕ್ಷರ ಗಾತ್ರ

ಹಾಸನ: ‘ನಿವೇಶನದ ಹೆಸರಿನಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಸಾರ್ವಜನಿಕರಿಂದ ಮುಂಗಡವಾಗಿ ಹೆಚ್ಚು ಹಣ ಪಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹುಡಾ ವಸತಿ ಬಡಾವಣೆಗಳನ್ನು ನಿರ್ಮಿಸಲು ಸಾರ್ವಜನಿಕರಿಂದ ಮುಂಗಡ ಹಣ ಪಡೆದುಕೊಳ್ಳುತ್ತಿದೆ. ಇದರಲ್ಲಿ ಪ್ರಾಧಿಕಾರವು ಕೇವಲ ಹಣ ಮಾಡುವ ದುರುದ್ದೇಶ ಹೊಂದಿರುವುದು ಕಂಡು ಬರುತ್ತದೆ. ಅಂದಾಜು ನಿವೇಶನಗಳ ಪಟ್ಟಿಯಲ್ಲಿ 6,784 ಎಂದು ಪ್ರಕಟಣೆ ಹೊರಡಿಸಿದೆ. ಆದರೆ, 2020ರಲ್ಲಿಯೂ ಇದೇ ರೀತಿ ಪ್ರಕಟಣೆ
ಹೊರಡಿಸಿ ಸುಮಾರು 57 ಸಾವಿರ ಅರ್ಜಿಗಳನ್ನು ಸ್ವೀಕರಿಸಿದೆ. ಈ ವರ್ಷ ಮತ್ತೆಹೊಸದಾಗಿ ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷವೂ ಸೇರಿ ಇಲ್ಲಿಯವರೆಗೆ ಸರಿ ಸುಮಾರು 80 ಸಾವಿರ ಅರ್ಜಿಗಳು ಬಂದಿವೆ. ಒಟ್ಟು ಒಂದು ಲಕ್ಷ ಅರ್ಜಿ ಬರುವ ನಿರೀಕ್ಷೆ ಇದೆ ಎಂದರು.

‘2020ರಿಂದ ಇಲ್ಲಿಯವರೆಗೂ ಕೇವಲ ರೈತರಿಂದ 50:50 ರ ಅನುಪಾತದಲ್ಲಿ ಒಪ್ಪಂದ ಮಾಡಿಕೊಂಡಿರುವುದನ್ನು ಬಿಟ್ಟರೆ ವಸತಿ ಬಡಾವಣೆ ನಿರ್ಮಿಸುವ ಸಲುವಾಗಿ ಕೆಲಸ ಕಾರ್ಯಗಳು ಸ್ವಲ್ಪವೂ ಆರಂಭವಾಗಿಲ್ಲ. ಇಷ್ಟೆಲ್ಲಾ ಇದ್ದರೂ ನಿವೇಶನಗಳು ಒಂದಕ್ಕೆ ಶೇಕಡಾ 10 ರಂತೆ ಮುಂಗಡ ಠೇವಣಿಯಾಗಿ ಹಣ ಕಟ್ಟಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಎಲ್ಲಾ ವಿಧದ ನಿವೇಶನಗಳಿಗೆ ಸರಿ ಸುಮಾರು ಒಂದು ಲಕ್ಷ ಅರ್ಜಿದಾರರು ಅರ್ಜಿಸಲ್ಲಿಸಿದಾಗ ಸರಾಸರಿ ಒಂದೂವರೆ ಲಕ್ಷ ರೂಪಾಯಿ ಮುಂಗಡ ಹಣ ಕಟ್ಟಿದರೆ, ಸಾವಿರಾರು ಕೋಟಿ ಹಣ ಕ್ರೋಡೀಕರಣವಾಗುತ್ತದೆ. ನಿವೇಶನಗಳ ಹಂಚಿಕೆಗೆ ಎಷ್ಟು ವರ್ಷ ಬೇಕಾಗುತ್ತೆ ಎಂಬ ಸ್ಪಷ್ಟತೆ ಇಲ್ಲವಾದ್ದರಿಂದ ಇದು ಸಾರ್ವಜನಿಕರ ಹಣ ಲೂಟಿಯಲ್ಲದೆ ಮತ್ತೇನೂ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತುರ್ತಾಗಿ ಈ ಪ್ರಕ್ರಿಯೆ ನಿಲ್ಲಿಸಿ ಮರು ಪರಿಶೀಲಿಸಬೇಕು. ಸಾರ್ವಜನಿಕರು ಈ ವಿಷಯವಾಗಿ ಧ್ವನಿ ಎತ್ತಬೇಕು. ಇಲ್ಲವಾದರೆ ಕಷ್ಟಪಟ್ಟು ದುಡಿದ ಠೇವಣಿ ಇಟ್ಟ ಹಣಕ್ಕೆ ಮಹತ್ವ ಇಲ್ಲದಂತಾಗುತ್ತದೆ’ ಎಂದು ಎಚ್ಚರಿಸಿದರು.

‌ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಶಿವಕುಮಾರ್,ಸಂಘಟನಾ ಕಾರ್ಯದರ್ಶಿ ಕೆ.ಎಸ್.ಶ್ರೀನಿವಾಸ್, ಕಾರ್ಯಕರ್ತರಾದ ಬಾಬು, ರಮೇಶ್, ಪ್ರೇಮಕುಮಾರ್, ಅಶ್ರುಖಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT