ಸಚಿವರ ಕಾರ್ಯವೈಖರಿ ಖಂಡಿಸಿ ಪ್ರತಿಭಟನೆ

ಚನ್ನರಾಯಪಟ್ಟಣ: ದಂಡಿಗನಹಳ್ಳಿ ಹೋಬಳಿ ಕುಂದೂರುಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಷಯದಲ್ಲಿ ಜಿಲ್ಲಾ ಸಚಿವರ ಹಸ್ತಕ್ಷೇಪ ಖಂಡಿಸಿ ಸಂಘದ ಅಧ್ಯಕ್ಷ ರವೀಶ್ ನೇತೃತ್ವದಲ್ಲಿ ಷೇರುದಾರರು ಶುಕ್ರವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರವೀಶ್ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಯಿತು ಎಂಬ ಕಾರಣದಿಂದ ಸಚಿವ ಎಚ್.ಡಿ.ರೇವಣ್ಣ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸಿ 10 ನಿರ್ದೇಶಕರ ಪೈಕಿ 6 ನಿರ್ದೇಶಕರಿಂದ ರಾಜೀನಾಮೆ ಕೊಡಿಸಿದ್ದಾರೆ’ ಎಂದು ದೂರಿದರು.
6 ನಿರ್ದೇಶಕರಿಂದ ಗುರುವಾರ ರಾಜೀನಾಮೆ ಕೊಡಿಸಲಾಗಿದೆ. ಆದರೆ ಕಳೆದ ತಿಂಗಳು 28ರಂದು ರಾಜೀನಾಮೆ ನೀಡಲಾಗಿದೆ ಎಂಬಂತೆ ನಮೂದಿಸಿ ಅಂಗೀಕರಿಸಲಾಗಿದೆ. 6 ನಿರ್ದೇಶಕರಿಗೆ ಅನೇಕ ಆಮಿಷ ಒಡ್ಡಲಾಗಿದೆ. ಈ ಸಹಕಾರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಹುನ್ನಾರ ನಡೆಸಲಾಗಿದೆ ಎಂದು ಆಪಾದಿಸಿದರು.
‘ಕುಂದೂರು ಮಠದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಇತ್ತೀಚೆಗೆ ಸೂಪರ್ಸೀಡ್ ಮಾಡಲು ಯತ್ನಿಸಲಾಗಿತ್ತು. ಅದು ಸಾಧ್ಯವಾಗದಿದ್ದಾಗ ನಿರ್ದೇಶಕರಿಂದ ರಾಜೀನಾಮೆ ಕೊಡಿಸುವ ಕೆಲಸಕ್ಕೆ ಸಚಿವ ರೇವಣ್ಣ ಮುಂದಾದರು. ಅಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡಿದರೂ ಇಲ್ಲಸಲ್ಲದ ಪಿತೂರಿ ಮಾಡಲಾಗಿದೆ. ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.