ಶನಿವಾರ, ಮೇ 8, 2021
25 °C
ನಿಷೇಧಾಜ್ಞೆ ನಡುವೆಯೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಮದ್ಯದಂಗಡಿ ಪರ ಪ್ರತಿಭಟಿಸಿದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಗಾಡೇನಹಳ್ಳಿ ಸುತ್ತಮುತ್ತ ಯಾವುದಾದರೊಂದು ಗ್ರಾಮಕ್ಕೆ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಮುಖಂಡರನ್ನು ಪೊಲೀಸರು ಬಂಧಿಸಿದರು.

ಗಾಡೇನಹಳ್ಳಿ ಗ್ರಾಮಸ್ಥರು ಜಮಾವಣೆಗೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅಭಿಜಿತ್‌ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ರೇಣುಕಾಪ್ರಸಾದ್‌, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿ ಪ್ರತಿಭಟನೆ ನಡೆಸಂತೆ ನಿಷೇಧ ಹೇರಲಾಗಿದೆ. ಆದರೂ 100 ಕ್ಕೂ ಹೆಚ್ಚು ಜನ ಸೇರಿರುವ ಕಾರಣ ಪ್ರತಿಭಟನೆ ಕೈಬಿಡುವಂತೆ ಸೂಚಿಸಿದರು.

ಕೆಲವರನ್ನು ಪೊಲೀಸರು ಹೊರಗೆ ಕಳಿಸಿದರು. ಮತ್ತೆ ಕೆಲವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗಾಡೇನಹಳ್ಳಿಯ ಮೂರು ಜನ ಮುಖಂಡರನ್ನು ಬಂಧಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಲಾಯಿತು.

ಗಾಡೇನಹಳ್ಳಿಯ ಕುಮಾರ್ ಮಾತನಾಡಿ‌, ಗಾಡೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮತ್ತು ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸುತ್ತಮುತ್ತಲಿನ 20 ಗ್ರಾಮಗಳಿಗೆ ಮದ್ಯದಂಗಡಿ ಇಲ್ಲ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಇರುವುದರಿಂದ ಸಂಜೆ ವೇಳೆ ಮದ್ಯ ಸೇವನೆಗೆ ಅಕ್ಕಪಕ್ಕದ ಊರುಗಳಿಗೆ ತೆರಳಬೇಕು. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿದೆ ಎಂದರು.

ಆದ್ದರಿಂದ ಗಾಡೇನಹಳ್ಳಿ ಸುತ್ತಮುತ್ತ ಯಾವುದಾದರೂ ಒಂದು ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕು. ಇದರಿಂದ ದುಪ್ಪಟ್ಟು ಹಣ ನೀಡಿ ಕಳಪೆ ಗುಣಮಟ್ಟದ ಮದ್ಯ ಸೇವನೆ ಮಾಡುವುದು ತಪ್ಪುತ್ತದೆ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗಾಡೇನಹಳ್ಳಿಯ ಚಂದುಗೌಡ, ನಾರಾಯಣ, ಶಂಕರ, ಆರ್‌. ಕುಮಾರ್‌, ಮಂಜೇಗೌಡ, ಶೇಖರ, ನಾಗೇಶ್‌, ಸ್ವಾಮಿ, ಅಶೋಕ್‌ ಕುಮಾರ್‌, ಆನಂದ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.