ಮಂಗಳವಾರ, ಆಗಸ್ಟ್ 20, 2019
27 °C

ಸಮಯ ವ್ಯರ್ಥ ಮಾಡದೆ, ಜ್ಞಾನ ಸಂಪಾದಿಸಿ: ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಸಲಹೆ

Published:
Updated:
Prajavani

ಹಾಸನ: ಶಿಕ್ಷಣ ಮುಗಿಯದ ಆಸ್ತಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭ್ಯಾಸ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.

ಸರ್ಕಾರಿ ಕಲಾ, ವಾಣಿಜ್ಯ, ಸ್ನಾತಕೋತ್ತರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಜೀವನದ ಅತ್ಯಮೂಲ್ಯ ಕ್ಷಣಗಳನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆಯ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

ಕಾಲೇಜು ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಪಾಷಾ, ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಲಿತರೆ ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸಬಹುದು ಎಂದು ಕಿವಿಮಾತು ಹೇಳಿದರು.

ಶ್ರದ್ಧೆ, ಆಸಕ್ತಿಯಿದ್ದರೆ ಜೀವನದಲ್ಲಿ ಏನು ಬೇಕಾದರು ಸಾಧಿಸಲು ಸಾಧ್ಯ. ತಂದೆ, ತಾಯಿಗಳ ನಿರೀಕ್ಷೆಗೂ ಮೀರಿದ ಸಾಧನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಂತೆ ಸಲಹೆ ನೀಡಿದರು.

ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್ ಗಂಗೇಗೌಡ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಶಿಕ್ಷಣದ ಪ್ರತಿಯೊಂದು ವಿಭಾಗವೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅವುಗಳ ಸಮರ್ಪಕ ಅಧ್ಯಯನ ಹಾಗೂ ಗ್ರಂಥಾಲಯಗಳ ಬಳಕೆಯಿಂದ ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಪ್ರಾಂಶುಪಾಲ ಸಿ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಉದಯಕುಮಾರ್ ಪ್ರಾಸ್ತಾವಿಕ ನುಡಿಯನ್ನಾಡಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ವಿ.ಸುನೀತಾ, ಕಚೇರಿ ವ್ಯವಸ್ಥಾಪಕ ಬಿ.ಎಸ್.ಧರ್ಮಪ್ಪ, ಅಧೀಕ್ಷಕ ಕೆ.ಟಿ.ಸತ್ಯಮೂರ್ತಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಸಿ.ಆರ್.ನಿಂಗರಾಜು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಪಿ.ಪುಟ್ಟರಾಜು ಹಾಜರಿದ್ದರು.

Post Comments (+)