ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಕಾಲೇಜು ಅಭಿವೃದ್ಧಿಗೆ ₹ 45 ಕೋಟಿ: ಎಚ್‌.ಡಿ.ರೇವಣ್ಣ

ಫಲಿತಾಂಶದಲ್ಲಿ ಸುಧಾರಣೆ ಕಾಣದಿದ್ದರೆ ಕ್ರಮದ ಎಚ್ಚರಿಕೆ
Last Updated 3 ಜನವರಿ 2019, 14:16 IST
ಅಕ್ಷರ ಗಾತ್ರ

ಹಾಸನ: ‘ಕಳೆದ ವರ್ಷ ಎಸ್ಸೆಸ್ಸಲ್ಸಿ, ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ 7 ಮತ್ತು 8ನೇ ಸ್ಥಾನ ಪಡೆದಿದೆ. ಈ ಬಾರಿ ಪ್ರಗತಿ ಕಾಣದಿದ್ದರೆ ಸಂಬಂಧಪಟ್ಟವರನ್ನು ಜಿಲ್ಲೆಯಿಂದ ಹೊರ ಹಾಕಲಾಗುವುದು’ ಎಂದು ಸಚಿವ ಎಚ್‌.ಡಿ.ರೇವಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯಶಿಕ್ಷಕರ ಸಭೆ ನಡೆಸಿದರು.

‘ಈಗಿನಿಂದಲೇ ವಿಶೇಷ ತರಗತಿ ನಡೆಸುವ ಮೂಲಕ ಕಲಿಕಾ ಮಟ್ಟ ಸುಧಾರಿಸುವಂತೆ ಕ್ರಮ ವಹಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿರುವ 83 ಪಿಯು ಕಾಲೇಜುಗಳ ಅಭಿವೃದ್ಧಿಗೆ ₹ 45 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಡವರ ಮಕ್ಕಳು ಚೆನ್ನಾಗಿ ಓದಿ ಕೀರ್ತಿ ತರಬೇಕು ಎಂದರು.

ಹೆತ್ತೂರಿನಲ್ಲಿ ಮಹಿಳಾ ವಸತಿ ನಿಲಯ ತೆರೆಯಲು ₹ 2 ಕೋಟಿ ನೀಡಲಾಗಿದೆ. ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ಅಲ್ಲಿ ಎಂಎಸ್‌ಸಿ ಕೋರ್ಸ್‌ ತೆರೆಯಬೇಕು ಎಂದು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ಶಾಲಾ, ಕಾಲೇಜುಗಳ ಕುಂದು, ಕೊರತೆ ಆಲಿಸಿದ ಸಚಿವರು, ಕಟ್ಟಡ, ಶೌಚಾಲಯದ ಕೊರತೆ ಹಾಗೂ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರದಲ್ಲಿ ವ್ಯತ್ಯಯವಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲಾ ಶಾಲಾ, ಕಾಲೇಜು ಮುಖ್ಯಸ್ಥರಿಂದ ವೈಯಕ್ತಿಕವಾಗಿ ಬೇಡಿಕೆ ವಿವರ ಪಡೆದ ಸಚಿವರು, ಅಗತ್ಯಕ್ಕೆ ಅನುಗುಣವಾಗಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಪದವಿ ಕಾಲೇಜುಗಳ ಅಭಿವೃದ್ಧಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಒಟ್ಟಾರೆ ₹ 1400 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಹೊಸದಾಗಿ 1000 ಮಾದರಿ ಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಪಂಚಾಯಿತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ₹ 3.05 ಕೋಟಿ ವೆಚ್ಚದಲ್ಲಿ 5 ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನಬಾರ್ಡ್ ಯೋಜನೆಯಡಿ ₹ 2.93 ಕೋಟಿ ವೆಚ್ಚದಲ್ಲಿ 3 ಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT