ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಅಂತರ ಪಾಲನೆಗೆ ವ್ಯವಸ್ಥೆ; ಥರ್ಮಲ್‌ ಸ್ಕ್ರೀನಿಂಗ್ ತಪಾಸಣೆ

ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು 16,808 ವಿದ್ಯಾರ್ಥಿಗಳು ಸಜ್ಜು
Last Updated 15 ಜೂನ್ 2020, 11:48 IST
ಅಕ್ಷರ ಗಾತ್ರ

‌ಹಾಸನ: ಕೋವಿಡ್‌ ಭೀತಿಯ ನಡುವೆ ಜೂನ್‌ 18ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುರಕ್ಷತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್‌ ಹಾಗೂ ಮಾಸ್ಕ್‌ ವಿತರಣೆಗೆ ಕ್ರಮ ಕೈಗೊಂಡಿದೆ. ಮಾರ್ಚ್‌ 19ರಂದು ನಿಗದಿಯಾಗಿದ್ದ ಇಂಗ್ಲಿಷ್‌ ಪರೀಕ್ಷೆಯನ್ನು ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮುಂದೂಡಲಾಗಿತ್ತು. ಈಗ ವಿದ್ಯಾರ್ಥಿಗಳು ಮೂರು ತಿಂಗಳ ಬಳಿಕ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 16,808 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ತೆರೆಳಿದ್ದ 120 ವಿದ್ಯಾರ್ಥಿಗಳು ತಮ್ಮ ಗ್ರಾಮದ ಸಮೀಪದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ ಬೇರೆ ಜಿಲ್ಲೆಯ ಒಟ್ಟು 928 ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.

ಮೊದಲು 9 ಬ್ಲಾಕ್‌ಗಳು, 734 ಕೊಠಡಿಗಳು ಇದ್ದವು. ಈ ಬಾರಿ ಅಂತರ ಪಾಲನೆ ಮಾಡಬೇಕಾಗಿರುವುದರಿಂದ
ಹೆಚ್ಚುವರಿಯಾಗಿ 13 ಬ್ಲಾಕ್‌ಗಳು ಹಾಗೂ 562 ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್‌ ಮಾಡಿಸಲಾಗುತ್ತಿದೆ. 30 ಪರೀಕ್ಷಾ ಕೇಂದ್ರಗಳ ಪೈಕಿ ಹಾಸನ ನಗರದಲ್ಲಿಯೇ 11 ಕೇಂದ್ರಗಳಿವೆ.

‘ವಿದ್ಯಾರ್ಥಿಗಳಲ್ಲಿ ಜ್ವರ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕೊರೊನಾ ಮೊದಲು ಒಂದು ಕೊಠಡಿಯಲ್ಲಿ 30 ವಿದ್ಯಾರ್ಥಿಗಳವರೆಗೆ ಕೂರಿಸಲಾಗುತ್ತಿತ್ತು. ಈಗ ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಜಿಗ್‌–ಜಾಗ್‌ ಮಾದರಿಯಲ್ಲಿ ಕೂರಿಸಲು ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ಎಂದು ಸರ್ಕಾರಿ ವಿಭಜಿತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಪಿ.ಸುರೇಶ್‌ ಹೇಳಿದರು.

‘ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಸುರಕ್ಷತಾ ಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್‌ ಹೊರತು ಪಡಿಸಿ ಎಲ್ಲ ಪರೀಕ್ಷೆ ಕೇಂದ್ರಗಳು ತಾಲ್ಲೂಕು ಕೇಂದ್ರಗಳಲ್ಲಿ ಇದೆ. ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕಾಗಿರುವ ಕಾರಣ 8.30ಕ್ಕೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್‌ ಇಡಲಾಗುವುದು. ಕೊಠಡಿಯ ಒಳಗೆ ಹೋಗುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ತಪಾಸಣೆಗೆ ಒಳಪಡಿಸಲಾಗುವುದು. ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ, ಚನ್ನರಾಯಪಟ್ಟಣದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಮಾಸ್ಕ್‌ ಗಳನ್ನು ನೀಡಿದ್ದಾರೆ. ಕೆಲವು ಕಡೆ ದಾನಿಗಳು ಸಹನೀಡಿದ್ದಾರೆ. ಸ್ಥಳೀಯವಾಗಿ ಖರೀದಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ’ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಸಿ.ಡಿ.ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡುವಂತೆ ಈಗಾಗಲೇ ಕೆಎಸ್ಆರ್‌ಟಿಸಿಗೆ ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳು ಬರುವ ಪ್ರದೇಶಗಳ ಬಗ್ಗೆ ಪಟ್ಟಿ ಕೊಡಲಾಗಿದೆ. ಹಾಗಾಗಿ ಸಾರಿಗೆ ಬಸ್‌ ಸಮಸ್ಯೆ ಉಂಟಾಗುವುದಿಲ್ಲ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT