ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟರಂಗಶೆಟ್ಟಿ, ದಿನೇಶ್ ರಾಜೀನಾಮೆಗೆ ಆಗ್ರಹ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 8 ಜನವರಿ 2019, 13:49 IST
ಅಕ್ಷರ ಗಾತ್ರ

ಹಾಸನ: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ ಸಿಕ್ಕಿರುವ ₹ 26 ಲಕ್ಷದ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸೌಧದಲ್ಲಿ ಲಕ್ಷಾಂತರ ರೂಪಾಯಿ ನಗದು ಕಚೇರಿ ಸಿಬ್ಬಂದಿ ಬಳಿ ಸಿಕ್ಕಿದೆ. ಅಷ್ಟೊಂದು ಹಣ ಬಂದದ್ದು ಹೇಗೆ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪುಟ್ಟರಂಗಶೆಟ್ಟಿ ಅವರ ಪರ ವಕಾಲತ್ತು ವಹಿಸುತ್ತಿರುವುದು ರಾಜಕಾರಣಿಗಳ ನಿಜ ಬಣ್ಣ ಬಯಲು ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ₹ 26 ಲಕ್ಷ ಹಣವನ್ನು ಪುಟಗೋಸಿ ಎಂದು ಕರೆಯುತ್ತಾರೆ. ಸಾರ್ವಜನಿಕರು ಬೆವರು ಸುರಿಸಿ ದುಡಿದು ಗಳಿಸುವ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುತ್ತಾರೆ. ಆದರೆ, ಅದನ್ನು ಸಚಿವರು ದುರುಪಯೋಗ ಮಾಡಿಕೊಂಡಿದ್ದಾರೆ. ಸೂಕ್ತ ತನಿಖೆ ಮೂಲಕ ಬಹಿರಂಗಪಡಿಸಬೇಕು. ಈ ಇಬ್ಬರೂ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಕಡಿಮೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವುದಕ್ಕಾಗಿ ಸೆಸ್ ದರ ಹೆಚ್ಚಿಸಿದೆ. ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದ ಪ್ರಗತಿಪರರು, ಕಾಂಗ್ರೆಸ್ ಕಾರ್ಯಕರ್ತರು ಈಗ ಏನು ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಏಳು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಆಗಿಲ್ಲ. ಸಾಲ ಮನ್ನಾ ಕುರಿತು ಸ್ಪಷ್ಟ ನಿರ್ಧಾರವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಕೈಗೊಂಡಿಲ್ಲ. ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸದೆ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ’ ಎಂದರು.

‘ಕನ್ನಡ ಅನ್ನ ನೀಡುವ ಭಾಷೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾದರೆ ತಾಯಿ ಭಾಷೆ ನಾಶವಾಗುತ್ತದೆ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಮತ್ತಷ್ಟು ಅನುದಾನ ನೀಡುವ ಮೂಲಕ ಬಡಮಕ್ಕಳ ಶೈಕ್ಷಣಿಕ ಏಳಿಗೆಗೆ ಶ್ರಮಿಸಬೇಕು’ ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ನಾಗೇಶ್, ಲೋಹಿತ್, ಮೋಹನ್, ಸುನೀಲ್, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT