ಮಂಗಳವಾರ, ಡಿಸೆಂಬರ್ 10, 2019
19 °C
95 ಸಾವಿರ ಟನ್ ರಾಗಿ ಬೆಳೆ ಮಾರುಕಟ್ಟೆಗೆ ಬರುವ ಸಾಧ್ಯತೆ: ಡಿಸಿ

ಕ್ವಿಂಟಲ್‌ ರಾಗಿ ₹ 3150

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರೈತರ ಅನುಕೂಲಕ್ಕಾಗಿ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಶೀಘ್ರ ಖರೀದಿ ಮಾಡಲು ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತು ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸರ್ಕಾರದ ಆದೇಶದ ಅನ್ವಯ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಧಾರಣೆ ಇರುವುದರಿಂದ ಬೆಂಬಲ ಬೆಲೆಗಳಲ್ಲಿ ಖರೀದಿಸುವ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ 95 ಸಾವಿರ ಟನ್ ರಾಗಿ ಬೆಳೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರ ಕ್ವಿಂಟಲ್‌ ಗೆ ₹3150 ಗಳನ್ನು ರಾಗಿ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿದ್ದು, ಅದರಂತೆ ಬೇಗ ಖರೀದಿಸಿ ರೈತರಿಗೆ ಅನುಕೂಲವಾಗುವಂತೆ ಖರೀದಿ ಕೇಂದ್ರ ತೆರೆಯಬೇಕಿದೆ ಎಂದು ಹೇಳಿದರು.

ರೈತರಿಗೆ ಬಿತ್ತನೆ ಬೀಜ ಖರೀದಿ, ಬೆಂಬಲ ಬೆಲೆ, ಮಾರುಕಟ್ಟೆ ಹಾಗೂ ರಾಗಿ ಖರೀದಿ ಕೇಂದ್ರಗಳ ಕುರಿತು ನಿಯಮಿತವಾಗಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೆ.ಎಸ್‌.ಮಂಜೇಗೌಡ, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸವಿತಾ, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಶ್ರೀಹರಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)