ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತರೂ ಕೃಷಿ ಕಾಯಕಕ್ಕೆ ತೊಡಕು

ಜಮೀನಿನಲ್ಲಿ ವಿಪರೀತ ತೇವಾಂಶ: ಹಳದಿ ಬಣ್ಣಕ್ಕೆ ತಿರುಗುತ್ತಿದೆ ಜೋಳ
Last Updated 24 ಜುಲೈ 2022, 5:21 IST
ಅಕ್ಷರ ಗಾತ್ರ

ಆಲೂರು: ಎರಡು ದಿನಗಳಿಂದ ಮಳೆ ನಿಂತಿದ್ದರೂ, ತುಂತುರು ಮಳೆ ಆಗುತ್ತಿದೆ. ಕೃಷಿ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಕೆಲವು ಜೋಳ, ಶುಂಠಿ ಹೊಲಗಳಲ್ಲಿ ನಿಂತ ನೀರು ಇನ್ನೂ ಇಂಗಿಲ್ಲ.

8-10 ದಿನ ನಿರಂತವಾಗಿ ಮಳೆಯಾದ ಕಾರಣ ಹೊಲಗಳಲ್ಲಿ ನೀರು ನಿಂತಿದೆ. ಈ ಪರಿಣಾಮದಿಂದ ಕೆಲ ಹೊಲದಲ್ಲಿ ಜೋಳದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಬಿಸಿಲು ಭೂಮಿಗೆ ಬೀಳದ ಕಾರಣ ಇನ್ನೂ 3–4 ದಿನ ಹೊಲಗಳಲ್ಲಿ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಜೋಳದ ಸಸಿಗಳು ಹುಟ್ಟುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಮಣ್ಣು ಸಡಿಲಿಸಿ, ಬುಡಕ್ಕೆ ಮಣ್ಣು ಕೊಡಬೇಕಾಗಿತ್ತು. ಮಳೆಯಿಂದ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲ ಹೊಲಗಳಲ್ಲಿ ಬೆಳೆಗಿಂತ ಕಳೆ ಜಾಸ್ತಿಯಾಗಿದೆ. ಇಂತಹ ಹೊಲಗಳಲ್ಲಿ ಕಳೆ ನಾಶ ಮಾಡುವುದು ದೊಡ್ಡ ಸಾಹಸವಾಗಿದೆ.

ಹೊಲಗಳಲ್ಲಿ ತೇವಾಂಶ ಇರುವುದರಿಂದ ರೆಕ್ಕೆ ತಿನ್ನುವ ಹುಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕಳೆನಾಶಕ, ಕ್ರಿಮಿನಾಶಕ, ಗೊಬ್ಬರ ಹಾಕದೆ ಬೆಳೆ ಸದೃಢವಾಗಿ ಬೆಳೆಯಲಿಲ್ಲ. ಒಂದು ತಿಂಗಳಾದರೂ ಗಿಡಗಳು ಬೆಳೆಯದೆ ಕುಗ್ಗಿವೆ ಎಂದು ರೈತರು ಹೇಳುತ್ತಿದ್ದಾರೆ.

ಕೃಷಿಯಲ್ಲಿ ತೊಡಗಿಕೊಂಡ ಕುಟುಂಬಗಳಲ್ಲಿ ಸ್ವಲ್ಪ ಮಟ್ಟಿಗೆ ಸಕಾಲಕ್ಕೆ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಕಾರ್ಮಿಕರನ್ನೆ ಅವಲಂಬಿಸಿರುವ ಬಹುತೇಕ ರೈತ ಕುಟುಂಬಗಳು, ಬೆಳೆಗಳಿಗೆ ಸಕಾಲಕ್ಕೆ ಸರಿಯಾಗಿ ಉಪಚರಿಸಲು ಸಾಧ್ಯವಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಸಂಬಳ ಅಧಿಕವಾಗಿದ್ದು, ಖರ್ಚು ಮಾಡಿದ ಹಣವನ್ನು ವಾಪಸ್‌ ಪಡೆಯಲು ಆಗುತ್ತಿಲ್ಲ.

‘ನ್ಯಾನೊ ಯೂರಿಯಾ ಕೊಡಿ’

10 ದಿನಗಳಿಂದ ನಿರಂತರ ಮಳೆ ಆಗಿದ್ದರಿಂದ ಜೋಳ ಬೆಳೆಗೆ ತೇವಾಂಶ ವಿಪರೀತವಾಗಿದೆ. ಜೋಳ ಬಿತ್ತನೆ ಮಾಡುವ ಸಂದರ್ಭದಲ್ಲಿ ಗೊಬ್ಬರ ಹಾಕಿದ್ದರೆ, ಈಗ ಕೇವಲ ನ್ಯಾನೊ ಯೂರಿಯಾ ಸಿಂಪಡಿಸಬೇಕು. ಒಂದು ಕೆ.ಜಿ. ನ್ಯಾನೊ ಯೂರಿಯಾ ಒಂದು ಚೀಲ ಯೂರಿಯಕ್ಕೆ ಸಮನಾಗಿರುತ್ತದೆ. ಇದನ್ನು ಸಿಂಪಡಿಸಿದರೆ ನೇರವಾಗಿ ಗಿಡದ ಬುಡಕ್ಕೆ ಹೋಗುವುದರಿಂದ ಗಿಡಗಳು ಸದೃಢವಾಗಿ ಬೆಳೆಯುತ್ತವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಮನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT