ಶುಕ್ರವಾರ, ಅಕ್ಟೋಬರ್ 29, 2021
20 °C
ಭಾರಿ ಗಾಳಿಗೆ ನಗರದ ಎಂ.ಜಿ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಕಾರು ಜಖಂ: ಚಾಲಕ ಪಾರು

ಹಾಸನ | ಮಹಾಮಳೆ; ಕೆರೆಯಾದ ರಸ್ತೆ: ಮನೆಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಭಾನುವಾರ ಮಧ್ಯಾಹ್ನ ದಿಢೀರ್ ಸುರಿದ ಮಹಾಮಳೆ ಸಾಕಷ್ಟು ತೊಂದರೆ ತಂದೊಡ್ಡಿತು. ನಗರದ ಎಂ.ಜಿ ರಸ್ತೆಯಲ್ಲಿ ಜೋರು ಮಳೆಗೆ ಬೃಹತ್ ಮರವೊಂದು ಬುಡಮೇಲಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಐಷಾರಾಮಿ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲಕ ಮೈಸೂರು ಮೂಲದ ಸುನಿಲ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧ್ಯಾಹ್ನ 1.30ಕ್ಕೆ ಆರಂಭವಾದ ಮಳೆ 2.40ರವರೆಗೂ ಧಾರಾಕಾರವಾಗಿ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.

ಬೀರನಹಳ್ಳಿ ಕೆರೆ ಬಡಾವಣೆ ಸೇರಿದಂತೆ ಅನೇಕ ತಗ್ಗು ಪ್ರದೇಶಗಳು ಹುಚ್ಚು ಮಳೆಯ ನೀರಿನಿಂದ ಜಲಾವೃತಗೊಂಡು, ನಿವಾಸಿಗಳು ಸಾಕಷ್ಟು ಪರದಾಡಿದರು. ಬಿಗ್ ಬಜಾರ್ ಎದುರಿನ ಬಿಎಂ ರಸ್ತೆ, ಎನ್.ಆರ್.ವೃತ್ತ ಮೊದಲಾದ ಕಡೆಗಳಲ್ಲಿ ಚರಂಡಿ, ರಸ್ತೆಗಳು ಒಂದಾಗಿ ವಾಹನ ಸವಾರರು ಸಂಚರಿಸಲು ಹೆಣಗಾಡಿದರು.

ಅಚ್ಚರಿ ರೀತಿಯಲ್ಲಿ ಪಾರು: ಮೈಸೂರಿನ ಸುನಿಲ್ ವಿವೇಕನಗರದ ಸಂಬಂಧಿಕರ ಮನೆಯಲ್ಲಿದ್ದ ಮಗಳನ್ನು ಕರೆದುಕೊಂಡು ಹೋಗಲು ನಗರಕ್ಕೆ ಆಗಮಿಸಿದ್ದರು.ಮಳೆಯ ನಡುವೆಯೇ ಎಂಜಿ ರಸ್ತೆಯ ವಿಶ್ವೇಶರಾಯ ಭವನದ ಮುಂಭಾಗ ಹೋಗುತ್ತಿದ್ದಾಗ ಹಳೆಯಕಾಲದ ಮರ ನೋಡ ನೋಡುತ್ತಿದ್ದಂತೆಯೇ ಬುಡಮೇಲಾಗಿದೆ. ಇದನ್ನು ಅರಿತ ಸುನಿಲ್ ಕೂಡಲೇ ಕಾರನ್ನು ನಿಲ್ಲಿಸಿದ್ದು, ಮರ ಮುಂಭಾಗದ ಮೇಲೆ ಮುರಿದು ಬಿದ್ದಿದೆ. ಅಕಸ್ಮಾತ್ ಚಾಲಕ ಮುಂದೆ ಚಲಿಸಿದ್ದರೆ ಬೇರೆಯದೇ ಅನಾಹುತ ನಡೆದು ಹೋಗುತ್ತಿತ್ತು.

ಗಂಟೆಗಟ್ಟಲೆ ರಸ್ತೆ ಬಂದ್: ಮರ ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಗಂಟೆಗಟ್ಟಲೆ ವಾಹನ ಸಂಚಾರ ಬಂದ್ ಆಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಗರ ಸಭೆ ಅಧ್ಯಕ್ಷ ಮೋಹನ್, ಸದಸ್ಯರಾದ ಚಂದ್ರೇಗೌಡ, ಸಂತೋಷ್ ನಗರಸಭೆ ಹಾಗೂ ಸೆಸ್ಕ್ ಸಿಬ್ಬಂದಿಯನ್ನು ಕರೆಸಿ ಮರ ತೆರವುಗೊಳಿಸಿ ಸಂಜೆ ವೇಳೆಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತೆರವು ಕಾರ್ಯ ಮುಗಿಯುವರೆಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೆ ಈ ಮಾರ್ಗದಲ್ಲಿ ಅಳವಡಿಸಿದ್ದ ವಿವಿಧ ಕೇಬಲ್ ಸಂಪರ್ಕ ಕಟ್ ಆಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ಹಾಗೂ ಸದಸ್ಯ ಸಂತೋಷ್‌ ಜೆಸಿಬಿ ಯಂತ್ರದ ಮೂಲಕ ಮರ ತೆರವು ಮಾಡಿದರು. ಸಂಜೆ 6 ಗಂಟೆಯವರೆಗೆ ಎಂ.ಜಿ. ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ತಗ್ಗು ಪ್ರದೇಶ ತುಂಬೆಲ್ಲಾ ನೀರು: ಸುಮಾರು 1 ಗಂಟೆಗೂ ಹೆಚ್ಚು ಕಾಲ ಧೋ ಎಂದು ಸುರಿದ ಮಳೆ ರಾಯನ ಆರ್ಭಟಕ್ಕೆ ಬೀರನಹಳ್ಳಿ ಕೆರೆ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಬೀದಿಗಳ ತುಂಬೆಲ್ಲಾ ಮಳೆ ನೀರು ಆವರಿಸಿಕೊಂಡಿತ್ತು.  ಭಾನುವಾರ ನಿಮಿತ್ತ ಮನೆಯಲ್ಲೇ ಉಳಿದಿದ್ದ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಮನೆಯಲ್ಲಿದ್ದ ಅನೇಕ ಗೃಹಬಳಕೆ ವಸ್ತುಗಳು ನೀರಿನಲ್ಲಿ ಮುಳುಗಿದ್ದವು. ಕೆಲವೆಡೆ ಆಹಾರ ಸಾಮಗ್ರಿ ನೀರು ಪಾಲಾಗಿವೆ.

ತುಂಬಿ ಹರಿದ ಯುಜಿಡಿ: ಇದೇ ರೀತಿ ಹೊಯ್ಸಳನಗರ, ಬೀರನಹಳ್ಳಿ ಕೆರೆ ಮೊದಲಾದ ಕಡೆಗಳಲ್ಲಿ ಯುಜಿಡಿ ಗುಂಡಿ ತುಂಬಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚರಂಡಿಗಳು ಭರ್ತಿಯಾಗಿ ಅದರ ನೀರೂ ಸಹ ಅನೇಕ ಕಡೆಗಳಲ್ಲಿ ರಸ್ತೆ ಮೇಲೆಯೇ ಹರಿಯಿತು.

ಕೆರೆಯಂತಾದ ರಸ್ತೆ: ಬಿಗ್‌ಬಜಾರ್ ಎದುರಿನ ಬಿಎಂ ರಸ್ತೆ ಅಕ್ಷರಶಃ ಕೆರೆಯಂತಾಗಿತ್ತು. ಹುಚ್ಚು ಮಳೆ ನೀರಿಗೆ ರಸ್ತೆ ಸಂಪೂರ್ಣ ಮುಳುಗಿದ್ದರಿಂದ ಎಲ್ಲಾ ರೀತಿಯ ವಾಹನ ಸವಾರರು ಪರದಾಡಬೇಕಾಯಿತು. ಈ ವೇಳೆ ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು. ಕೆಲವರು ಬಿಎಸ್‌ಎನ್‌ಎಲ್ ಮುಂಭಾಗದ ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಯಿತು.

ಬಡಾವಣೆ ಜಲಾವೃತ: ಇನ್ನು ಗೊರೂರು ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಇರುವ ನೂತನ ಬಡಾವಣೆ ತುಂಬೆಲ್ಲಾ ಮಳೆ ನೀರು ತುಂಬಿಕೊಂಡಿತ್ತು. ಹೆದ್ದಾರಿ 75 ಸೇರಿದಂತೆ ಈ ಭಾಗದ ರಸ್ತೆಗಳೂ ಜಲಾವೃತಗೊಂಡಿದ್ದರಿಂದ ಭಾನುವಾರ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಿದ್ದ ವಾಹನ ಸವಾರರು ಪ್ರಯಾಸ ಪಡಬೇಕಾಯಿತು.

ಹೊಯ್ಸಳ ನಗರದಲ್ಲಿ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿತು. ಮನೆಯಲ್ಲಿರುವ ವಸ್ತುಗಳಲ್ಲೇ ಮಳೆ ನೀರಿನಿಂದ ಹಾನಿಯಾದವು. ಮನೆಯಲ್ಲಿ ವಾಸ ಇದ್ದವರು ಬಕೆಟ್‌, ಪಾತ್ರೆಗಳನ್ನು ಬಳಸಿ ಮಳೆ ನೀರನ್ನು ಹೊರಹಾಕಲು ಪ್ರಯತ್ನಿಸಿದರು.

ಜಿಲ್ಲೆಯ ಸಕಲೇಶಪುರ, ಹೆತ್ತೂರು, ಆಲೂರು ಹಾಗೂ ಬೇಲೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.