ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ತಗ್ಗಿದ ವರುಣನ ಆರ್ಭಟ, ಪರಿಹಾರ ಕಾರ್ಯ ಚುರುಕು

ವಿದ್ಯುತ್‌ ಕಂಬ ದುರಸ್ತಿ ಆರಂಭ
Last Updated 9 ಆಗಸ್ಟ್ 2020, 14:27 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ವರುಣನ ಅಬ್ಬರ ಕಡಿಮೆಯಾಗಿದೆ. ಹಾಸನ, ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ಭಾಗದಲ್ಲಿ ತುಂತುರು ಮಳೆಯಾಗುತ್ತಿದೆ.

ಮಳೆ ಕಡಿಮೆ ಆಗಿರುವುದರಿಂದ ಪರಿಹಾರ ಕಾರ್ಯ ಚುರುಕುಗೊಂಡಿದೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳುಹಾನಿಗೊಳಗಾದ ಜಮೀನು ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಅಗತ್ಯವಿರುವ ವಿದ್ಯುತ್ ಕಂಬ ಮತ್ತು ಸಿಬ್ಬಂದಿಯನ್ನು ನೆರೆ ಜಿಲ್ಲೆಯಿಂದ ಕರೆಸಿಕೊಂಡು ದುರಸ್ತಿ ಕಾರ್ಯ ಆರಂಭಿಸಲಾಗಿದೆ.

ಭಾರಿ ಮಳೆಗೆ ನದಿ, ಕೆರೆ, ಹಳ್ಳ, ಕಾಲುವೆಗಳು ಉಕ್ಕಿ ಹರಿದವು. ಅನೇಕ ಕಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದವು, ಮಲೆನಾಡು ಭಾಗದಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು. ನೂರಾರು ಎಕರೆ ಪ್ರದೇಶದಲ್ಲಿ ಕಾಫಿ, ಮೆಣಸು, ಅಡಿಕೆ, ಬಾಳೆ ತೋಟ ಹಾನಿಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ವಿದ್ಯುತ್‌ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. 200ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಗೊರೂರಿನ ಹೇಮಾವತಿ, ಬೇಲೂರಿನ ಯಗಚಿ ಮತ್ತು ವಾಟೆಹೊಳೆ ಜಲಾಶಯಗಳು ಭರ್ತಿ ಆಗಿವೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊಂಚ ತಗ್ಗಿದ್ದರಿಂದ ಒಳ ಹರಿವು ಕಡಿಮೆ ಆಗಿದೆ.

ಆಲೂರು ತಾಲ್ಲೂಕಿನ ರಾಮನಹಳ್ಳಿ, ಸುಳಗೋಡು, ಗರಿಘಟ್ಟ, ಬಸವನಹಳ್ಳಿ, ಗಂಜಿಗರೆ, ಸಿದ್ದಾಪುರ, ಮೇರ್ವೆ, ಹಾಸನ ತಾಲ್ಲೂಕಿನ ಗೋವಿಂದಪುರ, ಆಲದಹಳ್ಳಿ, ಕಂಚಮಾರನಹಳ್ಳಿ, ಕಡಗದಲ್ಲಿ ಅಪಾರ ಪ್ರಮಾಣದ ಮೆಕ್ಕೆಜೋಳ, ಬಾಳೆ, ಭತ್ತ ನಾಶವಾಗಿದೆ.

ಮಳೆ ಪ್ರಮಾಣ ತಗ್ಗಿದ ಕಾರಣ ಜಲಾವೃತವಾಗಿದ್ದ ಸಕಲೇಶಪುರ ಪಟ್ಟಣದ ಹೇಮಾವತಿ ನದಿ ತೀರದ ಹೊಳೆಮಲ್ಲೇಶ್ವರದೇವಾಸ್ಥಾನ ಬಳಿ ನೀರು ಮಟ್ಟ ಕಡಿಮೆ ಆಗಿದೆ.

ಮಾರನಹಳ್ಳಿಯಲ್ಲಿ 3 ಸೆಂ. ಮೀ ಮಳೆ

ಭಾನುವಾರ ಬೆಳಿಗ್ಗೆವರೆಗೆ ದಾಖಲಾದ 24 ಗಂಟೆಗಳ ಹೋಬಳಿವಾರು ಮಳೆ ವರದಿ: ಹಾಸನ ತಾಲ್ಲೂಕಿನ ಸಾಲಗಾಮೆ 1.6 ಮಿ.ಮೀ., ಹಾಸನ 1.2 ಮಿ.ಮೀ., ಗೊರೂರು 0.9 ಮಿ.ಮೀ., ಕಟ್ಟಾಯ 1.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹೊಸೂರು 6.2 ಮಿ.ಮೀ., ಶುಕ್ರವಾರ ಸಂತೆ 17.4 ಮಿ.ಮೀ., ಹೆತ್ತೂರು 14.4 ಮಿ.ಮೀ., ಯಸಳೂರು 8 ಮಿ.ಮೀ., ಸಕಲೇಶಪುರ 17 ಮಿ.ಮೀ., ಬಾಳ್ಳುಪೇಟೆ 7.2 ಮಿ.ಮೀ., ಬೆಳಗೋಡು 6.5 ಮಿ.ಮೀ., ಮಾರನಹಳ್ಳಿ 28.2 ಮಿ.ಮೀ., ಹಾನುಬಾಳು 9 ಮಿ.ಮೀ., ಮಳೆಯಾಗಿದೆ.

ಅರಸೀಕೆರೆ ತಾಲ್ಲೂಕಿನ ಜಾವಗಲ್ 3 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 2 ಮಿ.ಮೀ., ಕಸಬಾ 10.3 ಮಿ.ಮೀ., ದೊಡ್ಡಮಗ್ಗೆ 8.2 ಮಿಮೀ., ರಾಮನಾಥಪುರ 2 ಮಿ.ಮೀ., ಬಸವಪಟ್ಟಣ 1.4 ಮಿ.ಮೀ., ಕೊಣನೂರು 2.4 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಕುಂದೂರು 3.4 ಮಿ.ಮೀ., ಆಲೂರು 5 ಮಿ.ಮೀ., ಕೆ. ಹೊಸಕೋಟೆ 12 ಮಿ.ಮೀ, ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು 7 ಮಿ.ಮೀ., ಬೇಲೂರು 0.4 ಮಿ.ಮೀ., ಗೆಂಡೆಹಳ್ಳಿ 3 ಮಿ.ಮೀ., ಅರೆಹಳ್ಳಿ 9.6ಮಿ.ಮೀ., ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ 2 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT