ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಭೂಮಿಗೆ ನಾಲ್ಕು ಪಟ್ಟು ಪರಿಹಾರ : ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹ

Last Updated 27 ಮೇ 2019, 14:22 IST
ಅಕ್ಷರ ಗಾತ್ರ

ಹಾಸನ: ರೈತರಿಂದ ವಶಪಡಿಸಿಕೊಂಡ ಭೂಮಿಗೆ ಹಾಲಿ ಇರುವ ದರಕ್ಕಿಂತ ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಭೂಮಿ ವಾಪಸ್ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಬುದ್ದ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ 2013ರ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ರೈತ ಸಮುದಾಯಕ್ಕೆ ಮೋಸ ಮಾಡುತ್ತಿದೆ. ರೈತರಿಂದ ಭೂಮಿ ಕಸಿದುಕೊಳ್ಳುವ ನಿರ್ಧಾರ ವಾಪಸ್‌ ಪಡೆಯದಿದ್ದರೆ ಜೂನ್‌ 10ರಂದು ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಲೂಗಡ್ಡೆ ಬಿತ್ತನೆಗೆ ಸಮರ್ಪಕ ಮಾರ್ಗ ಕಂಡುಕೊಂಡಿಲ್ಲ. ಹೊರ ರಾಜ್ಯದಿಂದ ಬಿತ್ತನೆ ಬೀಜ ಖರೀದಿಸುವ ಅವಶ್ಯಕತೆಯಿಲ್ಲ. ಆದರೆ ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ. ಸಾಲ ಮನ್ನಾ ವಿಚಾರದಲ್ಲಿ ಸಿ.ಎಂ ಎಚ್.ಡಿ. ಕುಮಾರಸ್ವಾಮಿ ಆರಂಭದಿಂದಲೂ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಚಿಕ್ಕಮಗಳೂರು ಬಸವ ಮಂದಿರದ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಯಾವ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಾಗಿ ಬೆಳೆಯಲು ಅವರಿಂದ ಸಾಧ್ಯವಾಗುವುದಿಲ್ಲ. ಅನ್ನದಾತರ ಬವಣೆಗಳನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲದಾಗಿದೆ. ಹಾಸನ ಹಾಗೂ ತುಮಕೂರಿನಲ್ಲಿ ಮಳೆ ಕೊರತೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಈ ಬಗ್ಗೆ ಯೋಚಿಸದೆ ಇರುವುದಕ್ಕೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎ.ವಿ. ಕಾಂತಮ್ಮ ಕಾಲೇಜು ಉಪನ್ಯಾಸಕ ಎಚ್.ಎಲ್. ಮಲ್ಲೇಶ್‍ಗೌಡ ಮಾತನಾಡಿ, ಕುವೆಂಪು ಅವರು ರೈತರನ್ನು ನೇಗಿಲ ಯೋಗಿ ಹಾಗೂ ದ.ರಾ. ಬೇಂದ್ರೆ ಚೊಚ್ಚಲ ಮಗ ಎಂದು ಕರೆದಿದ್ದಾರೆ. ಆದರೆ ಪ್ರಸ್ತುತ ಸರ್ಕಾರಗಳು ರೈತರ ಮಹತ್ವವನ್ನು ಅರಿಯದೆ ತಪ್ಪು ಮಾಡುತ್ತಿವೆ ಎಂದು ಹೇಳಿದರು.

ದೇಶಕ್ಕೆ ಅನ್ನ ಕೊಡುವ ರೈತನನ್ನು ನಿಕೃಷ್ಟವಾಗಿ ಕಾಣಲಾಗುತ್ತದೆ. ಅನ್ನ ನೀಡುವ ರೈತರಿಗೆ ಬೆಲೆ ನೀಡದಿದ್ದರೆ ಅದಕ್ಕಿಂತ ಕೆಟ್ಟ ಸಮಾಜ ಮತ್ತೊಂದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ರೈತ ಸಮುದಾಯ ಸಂಕಷ್ಟಕ್ಕೀಡಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತ ಸಮುದಾಯದ ಉಳಿವಿಗೆ ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಆನೆಕೆರೆ ರವಿ, ಕೃಷ್ಣ, ಕೋಲಾರ ಶಿವಪ್ಪ, ಮಹಿಳಾ ಘಟಕ ಉಪಾಧ್ಯಕ್ಷೆ ಅನುಸೂಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT