ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಗ್ರಾಮೀಣ ಬದುಕು ಸುಸ್ಥಿರಗೊಳಿಸಲು ಸಮುದಾಯ ಪಾತ್ರ ಮುಖ್ಯ: ಎಲ್‌.ಕೆ.ಅತಿಖ್‌

ರಾಜ್ಯಕ್ಕೆ 15 ವರ್ಷದಲ್ಲಿ 12 ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕಳೆದ ಹದಿನೈದು ವರ್ಷದಲ್ಲಿ ರಾಜ್ಯ ಹನ್ನೇರಡು ವರ್ಷ ಬರಪೀಡಿತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತಿಖ್‌ ಹೇಳಿದರು.

ಹಳೇಬೀಡಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪರಿಸರ ಸಮಾವೇಶದಲ್ಲಿ ಮಾತನಾಡಿದ ಅವರು, ಗಿಡ, ಮರ, ಗಾಳಿ, ಬೆಳಕು, ನೀರು ಪರಿಸರದ ಭಾಗ. ಈ ಸಂಪನ್ಮೂಲಗಳನ್ನು ಹೇಗೆ ಬಳಸುತ್ತಿದ್ದೇವೆ ಎಂಬುದರ ಕುರಿತು ಯೋಚಿಸಬೇಕು. ಮಳೆ ಕೊರತೆಯಿಂದ ಪದೇ ಪದೇ ಬರ ಎದುರಿಸುವಂತಾಗಿದೆ. ಕಳೆದ ವರ್ಷ ಅತಿ ಹೆಚ್ಚು ಮಳೆಯಾಗಿ ಜಲಾಶಯಗಳು ಭರ್ತಿಯಾದವು. ಆದರೆ ಕೆಲವೇ ತಿಂಗಳಲ್ಲಿ ಮಳೆ ಕೊರತೆಯಿಂದ ಬರ ಉಂಟಾಯಿತು. ಬರ ಪರಿಸ್ಥಿತಿ ಎದುರಿಸಲು ದೀರ್ಘಾವಧಿ ಯೋಜನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕೊಳವೆ ಬಾವಿ ವಿಫಲವಾದರೆ ಮತ್ತೊಂದು ಕೊಳವೆ ಬಾವಿ ಕೊರೆಸುತ್ತೇವೆ. ಇದೇ ರೀತಿ ಮಾಡಿದರೆ ಭೂಮಿ ಬರಡಾಗುತ್ತದೆ. ಬರ ನಿರ್ವಹಣೆಗೆ ಕೊಳವೆ ಬಾವಿ ಕೊರೆಸುವುದೇ ಪರಿಹಾರವಲ್ಲ. ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

‘ಪೂರ್ವಜರು ಕೆರೆ ನಿರ್ಮಿಸಿದರೆ, ನಾವು ಅವುಗಳನ್ನು ಕಡೆಗಣಿಸುತ್ತಿದ್ದೇವೆ. ಇಂದು ಕೆರೆಗಳಲ್ಲಿ ಗಿಡ, ಗಂಟಿ ಬೆಳೆದಿದೆ, ಹೂಳು ತುಂಬಿಕೊಂಡಿದೆ, ಹಲವೆಡೆ ಒತ್ತುವರಿಯೂ ಆಗಿದೆ. ಹಳೇಬೀಡಿನ ದ್ವಾರ ಸಮುದ್ರ ಕೆರೆ ಏಕೆ ತುಂಬುತ್ತಿಲ್ಲ? ಎಲ್ಲವನ್ನು ಸರ್ಕಾರವೇ ಮಾಡಬೇಕು ಎನ್ನುವ ಮನೋಭಾವ ಸರಿಯಲ್ಲ’ ಎಂದು ಹೇಳಿದರು.

ಮಳೆ ನೀರು ಹರಿದು ವ್ಯರ್ಥವಾಗಿ ಸಮುದ್ರ ಸೇರುವ ಬದಲು ಅದನ್ನು ಸಂಗ್ರಹಿಸಬೇಕು. ಹೂಳಿನ ಮಹತ್ವದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಜಲ ಸಾಕ್ಷರತೆಗಾಗಿ ಸರ್ಕಾರ ಜಾಲಾಮೃತ ಕಾರ್ಯಕ್ರಮ ರೂಪಿಸಿದೆ. ಈ ಯೋಜನೆಯಲ್ಲಿ ಸಮುದಾಯದವರು ಕೆರೆ ಅಭಿವೃದ್ಧಿ ಪಡಿಸಲು ಮುಂದೆ ನೆರವು ನೀಡಲಾಗುವುದು. ಗ್ರಾಮೀಣ ಬದುಕು ಸುಸ್ಥಿರಗೊಳಿಸಲು ಸಮುದಾಯ ಪಾತ್ರ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಒಣಭೂಮಿ ಇರುವ ದೇಶದ ಎರಡನೇ ದೊಡ್ಡ ರಾಜ್ಯ ಕರ್ನಾಟಕ. ಸರ್ಕಾರ ಬರ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಕೆಲವರಿಗೆ ಬರ ಎಂದರೆ ಹಬ್ಬ ಎಂಬಂತಾಗಿದೆ. ಪರಿಸರ ಉಳಿಸಲು ಗಿಡ ನೆಡಬೇಕು ಹಾಗೂ ಜಲ ಮೂಲಗಳನ್ನು ಪುನರುಜ್ಜೀವನಗೊಳಿಸಬೇಕು. ಪ್ರತಿ ಹಳ್ಳಿಗಳಲ್ಲೂ ಜಲಸಾಕ್ಷರತೆ ಕುರಿತು ಚರ್ಚೆಯಾಗಬೇಕು ಎಂದು ನುಡಿದರು.

ಒಂದೇ ದಿನ 30 ಲಕ್ಷ ಸಸಿ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್‌ 11 ರಂದು ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ 500 ಸಸಿ ನೆಡುವಂತೆ ಸೂಚನೆ ನೀಡಲಾಗಿದೆ. ಅಂದುಕೊಂಡಂತೆ ನಡೆದರೆ ಒಂದೇ ದಿನ 30 ಲಕ್ಷ ಸಸಿ ನೆಡಲಾಗುತ್ತದೆ. ಸಸಿ ನೆಟ್ಟರೆ ಸಾಲದು, ಅದಕ್ಕೆ ನೀರು ಹಾಕಿ ಪೋಷಣೆ ಮಾಡಬೇಕು ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು