ಶುಕ್ರವಾರ, ಮೇ 20, 2022
19 °C
ರೈತರ ಅನುಕೂಲಕ್ಕಾಗಿ ಹುಲಿಕಲ್ಲು, ಶಿವಮೊಗ್ಗದಲ್ಲಿ ಸಹಕಾರ ಸಂಘಗಳ ಸ್ಥಾಪನೆ

ಸೇವಾ ನಿವೃತ್ತಿ ಬಳಿಕ ಸಮಾಜ ಸೇವೆ: ಕಸ್ತೂರಿ ರಂಗನ್‌ಗೆ ರಾಜ್ಯೋತ್ಸವ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹುಲಿಕಲ್ಲು ಗ್ರಾಮದ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಆರ್‌. ಕಸ್ತೂರಿ ರಂಗನ್‌ ಅವರು 2020–21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೇವಾ ನಿವೃತ್ತಿ ಬಳಿಕ ಅವರ ಸಮಾಜ ಸೇವೆ ಪರಿಗಣಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಅವರು, 1942ರಲ್ಲಿ ಜನಿಸಿದರು. ಹುಲಿಕಲ್‌ನಲ್ಲಿ ಕೃಷಿ ಜಮೀನು ಹಾಗೂ ಮನೆ ಹೊಂದಿದ್ದಾರೆ.

ರೈತರ ಅನುಕೂಲಕ್ಕಾಗಿ ಆರು ವರ್ಷದ ಹಿಂದೆ ಗ್ರಾಮದಲ್ಲಿ ‘ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣಾ ಸಹಕಾರ ಸಂಘ’ ಸ್ಥಾಪಿಸಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಲಿಕಲ್ಲು ಗ್ರಾಮದಲ್ಲಿ ಮತ್ತೊಂದು ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಶಿವಮೊಗ್ಗದಲ್ಲಿ 2002ರಲ್ಲಿ ಅಡಿಕೆ ಮಾರಾಟಕ್ಕಾಗಿ ಸಹಕಾರ ಸಂಘ ಸ್ಥಾಪಿಸಿದ್ದಾರೆ.

1970ರಲ್ಲಿ  ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಡಿ.ವೈ.ಎಸ್ಪಿಯಾಗಿ ಸೇವೆ ಆರಂಭಿಸಿದ ಅವರು,  ಕೊಡಗು, ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮೆಟ್ರೋ ಪಾಲಿಟನ್‌ ಟಾಸ್ಕ್‌ಫೋರ್ಸ್‌ ಕರ್ನಾಟಕ ವಿದ್ಯುತ್‌ ಮಂಡಳಿ ಐಜಿಪಿಯಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತಿಯಾಗಿದ್ದಾರೆ.

1983ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಮುಖ್ಯಮಂತ್ರಿ ಚಿನ್ನದ ಪದಕ ಹಾಗೂ ನಗದು, 1988ರಲ್ಲಿ ರಾಷ್ಟ್ರಪತಿಗಳ ಪೊಲೀಸ್‌ ಚಿನ್ನದ ಪದಕ, 1999ರಲ್ಲಿ ರಾಷ್ಟ್ರಪತಿ ಪೊಲೀಸ್‌ ಚಿನ್ನದ ಪದಕ ಪಡೆದಿದ್ದಾರೆ.

‘ರಾಜ್ಯೋತ್ಸವ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ಬಂದಿರುವುದು ಸಂತೋಷ ಉಂಟು ಮಾಡಿದೆ. ಪೊಲೀಸ್ ವೃತ್ತಿಯಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುವ ರೀತಿ ಕರ್ತವ್ಯ ನಿರ್ವಹಿಸಿದ್ದೇನೆ. ನಿವೃತ್ತಿ ಬಳಿಕ ರೈತರಿಗೆ ಅನೂಕೂಲಕ್ಕಾಗಿ ಶಿವಮೊಗ್ಗ ಮತ್ತು ಹುಲಿಕಲ್ಲು ಗ್ರಾಮದಲ್ಲಿ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಿದ್ದೇನೆ’ ಎಂದು  ಎಚ್‌.ಆರ್‌. ಕಸ್ತೂರಿ ರಂಗನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು