ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಲಿಂಗ ಪೂಜೆ ಕಣ್ತುಂಬಿಕೊಂಡ ಭಕ್ತರು

ರಂಭಾಪುರಿ ಸ್ವಾಮೀಜಿ ಸಾನ್ನಿಧ್ಯ: ವಿವಿಧೆಡೆಯಿಂದ ಬಂದಿರುವ ಸಹಸ್ರಾರು ಜನ
Last Updated 27 ಸೆಪ್ಟೆಂಬರ್ 2022, 6:26 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಶಿವಕುಮಾರ ಸ್ವಾಮೀಜಿ ಸಭಾಭವನದಲ್ಲಿ ಸೋಮವಾರ ಬೆಳಿಗ್ಗೆ ಆಧಾತ್ಮಿಕ ಲೋಕ ಸೃಷ್ಟಿಯಾಗಿತ್ತು. ಹೊಯ್ಸಳರ ನಾಡಿನಲ್ಲಿ ವೇದಮಂತ್ರ ಘೋಷ ಮೊಳಗಿದವು. ಭಕ್ತರು ಪರಮಾತ್ಮನ ಧ್ಯಾನ ಮಾಡುತ್ತ ಸಮಾಜದ ಒಳಿತಿಗಾಗಿ ಪ್ರಾರ್ಥಿಸಿದರು.

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಆರಂಭದ ದಿನವಾದ ಸೋಮವಾರ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಇಷ್ಟಲಿಂಗ ಪೂಜೆಯ ಚಿತ್ರಣ.

ಹಸನ್ಮುಖಿಯಾಗಿ ಶಿಷ್ಯ ಬಳಗದೊಂದಿಗೆ ಸ್ಮಾಮೀಜಿ ಮಂತ್ರ ಪಠಣ ಮಾಡುತ್ತ, ಇಷ್ಟಲಿಂಗ ಪೂಜೆ ನೆರವೇರಿಸಿದರು. ರುದ್ರಾಭಿಷೇಕ ಸಹಿತ ನಡೆದ ಇಷ್ಟಲಿಂಗ ಪೂಜೆಯನ್ನು ನೆರದಿದ್ದ ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಇಷ್ಟಲಿಂಗ ಪೂಜೆಯಿಂದ ಪರಮಾತ್ಮನನ್ನು ಕಾಣಬಹುದು. ಶಿವಪೂಜೆ, ಲಿಂಗಪೂಜೆ ಅತ್ಯಂತ ಶ್ರೇಷ್ಠ. ಲಿಂಗಪೂಜೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ ಎಂದು ನಂಬಿರುವ ರಂಭಾಪುರಿ ಪೀಠದ ಭಕ್ತರು, ಸುದೀರ್ಘವಾಗಿ ನಡೆದ ಪೂಜೆಯನ್ನು ಜಾಗಬಿಟ್ಟು ಕದಲದೇ ವೀಕ್ಷಿಸಿದರು.

ಪೂಜಾ ಸ್ಥಳಕ್ಕೆ ಸ್ವಾಮೀಜಿ ಬರುತ್ತಿದ್ದಂತೆಯೇ ಭಕ್ತರಿಂದ ‘ಮಾನವ ಧರ್ಮಕೀ ಜೈ’, ‘ರಂಭಾಪುರಿ ಜಗದ್ಗುರುಗಳಿಗೆ ಜೈ’. ‘ವಂದೆ ರೇಣುಕಂ’ ಎಂಬ ಘೋಷಣೆಗಳು ಮುಗಿಲುಮುಟ್ಟಿದವು. ಗುರುಗಳು ಪೂಜೆ ಆರಂಭಿಸಿತ ತಕ್ಷಣ ಭಕ್ತರು ಭಕ್ತಿಯಲ್ಲಿ ಲೀನರಾದರು.

ರುದ್ರಾಭಿಷೇಕ ಸಹಿತ ಇಷ್ಟಲಿಂಗ ಪೂಜೆ ನೆರವೇರಿತು. ಸ್ವಾಮೀಜಿ ಅಂಗೈಯಲ್ಲಿ ಇಟ್ಟು ಪೂಜಿಸುತ್ತಿದ್ದ ಲಿಂಗುವಿಗೆ ಫಲ, ಪುಷ್ಪದೊದಿಗೆ ಸಹಸ್ರ ಅರ್ಚನೆ ನಡೆಯಿತು. ಪೂಜೆ ನಡೆಯುವ ಸಮಯದಲ್ಲಿ ಮಂತ್ರಘೋಷ ಹೊರತು ಪಡಿಸಿ, ಯಾವ ಶಬ್ಧವೂ ಕೇಳಿಬರದಂತೆ ಭಕ್ತರು ಮೌನವಾಗಿದ್ದರು. ಸಭಾಭವನ ಮಾತ್ರವಲ್ಲದೇ ಬೇಲೂರು ಪಟ್ಟಣದಾದ್ಯಂತ ವೇದಮಂತ್ರ ಘೋಷ ಮೊಳಗಿತ್ತು.

ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ಕೈಮುಗಿದು ಪ್ರಾರ್ಥಿಸಿದರು. ಮಾನವ ಕುಲಕ್ಕೆ ಒಳಿತಾಗಲಿ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ, ಶ್ರೇಷ್ಠವಾದ ಮಾನವ ಧರ್ಮಕ್ಕೆ ಒಳಿತಾಗಲಿ ಎಂದು ದೂರದ ಊರಿನಿಂದ ಬಂದಿದ್ದ ಭಕ್ತರು ಪರಮಾತ್ಮನಿಗೆ ನಮಿಸಿದರು.

ಮಹಾ ಮಂಗಳಾರತಿಯೊಂದಿಗೆ ಪೂಜೆ ಸಮಾಪ್ತಿಯಾದಾಗ ಭಕ್ತರು, ಹರಹರ ಪಾರ್ವತಿ ಪತೆ ಹರಹರ ಮಹಾದೇವ ಎಂಬ ಘೋಷವಾಕ್ಯದೊಂದಿಗೆ ಪಾರ್ವತಿ, ಪರಶಿವನನ್ನು ಸ್ಮರಿಸಿದರು. ಸೇರಿದ್ದ ಭಕ್ತರು ಸ್ವಾಮೀಜಿಗಳ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಶಾಸಕ, ದಸರಾ ಧರ್ಮ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಕಾರ್ಯಾಧ್ಯಕ್ಷ ಕೊರಟಿಗೆರೆ ಪ್ರಕಾಶ್, ಖಜಾಂಚಿ ನಟರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಹಗರೆ ದಿಲೀಪ್, ಗೌರವಾಧ್ಯಕ್ಷ ಸಿ.ಎಂ. ನಿಂಗರಾಜು, ಬಲ್ಲೇನಹಳ್ಳಿ ರವಿಕುಮಾರ್, ಅನ್ನಪೂರ್ಣ, ಚಂದ್ರಕಲಾ ಇದ್ದರು.

ಅಗ್ರೋದಕ ಮೆರವಣಿಗೆ

ಪೂಜೆಗೂ ಮುನ್ನ ಸುಮಂಗಲೆಯರು ಮಂಗಳವಾದ್ಯದೊಂದಿಗೆ ಪುರಸಭೆಯ ಗಣೇಶ ದೇವಾಲಯಕ್ಕೆ ತೆರಳಿ ಅಗ್ರೋದಕ ತಂದರು.

ಮೆರವಣಿಗೆಯಲ್ಲಿ ಸಾಗಿದ ಮಹಿಳೆಯರು ಕಳಸ ಹೊತ್ತು ಭಕ್ತಿಯ ಹೆಜ್ಜೆ ಹಾಕಿದರು. ಅಗ್ರೋದಕ ತರುವ ಮೆರವಣಿಗೆ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪಕ್ಕೆ ಬಂದು ಸೇರಿದಾಗ ಸಾವಿರಾರು ಭಕ್ತರು ಜಮಾಯಿಸಿದ್ದರು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ಭಕ್ತಿಯಿಂದ ನಮಿಸಿದರು.

ಧರ್ಮ ಸಮ್ಮೇಳನದಲ್ಲಿ ಇಂದು

ಸಾನಿಧ್ಯ- ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ, ನೇತೃತ್ವ– ಅರಕಲಗೂಡು ದೊಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ವೇದಘೋಷ-ಬಾಳೆಹೊನ್ನೂರು ರೇಣುಕಾಚಾರ್ಯ ಗುರುಕುಲ, ಸ್ವಾಗತ- ದಸರಾ ಧರ್ಮ ಸಮ್ಮೇಳನ ಉಪಾಧ್ಯಕ್ಷ ಎಂ.ಎಸ್.ರೇಣುಕಾರಾಧ್ಯ, ನಾಂದಿನುಡಿ-ಮಳಲಿ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಯುವಸಿರಿ ಪ್ರಶಸ್ತಿ ಪ್ರದಾನ–ಅಖಿಲ ಭಾರತ ವೀರಶೈವ ವೇದಿಕೆ ಅಧ್ಯಕ್ಷ ಜಯಂತ್ ಕುಮಾರ್, ಅತಿಥಿ– ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಸಿ.ಟಿ.ರವಿ, ಎಚ್.ಕೆ.ಕುಮಾರ ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯ ಸ್ವಾಮಿ, ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ರಾಷ್ಟ್ರೀಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಶಿವಯೋಗಿ ಹಿರೇಮಠ, ವಕೀಲ ಸಿ.ಎಂ.ನಿಂಗರಾಜು, ಮುಖಂಡರಾದ ನಂದೀಶ್ ಕಾಂತರಾಜು, ಧರಣೇಂದ್ರ, ರವಿಕುಮಾರ್, ಬೇಲೂರು ಶಿವಕುಮಾರ ಸ್ವಾಮೀಜಿ ಟ್ರಸ್ಟ್ ಕಾರ್ಯದರ್ಶಿ ಗುರುದೇವ, ಉಪನ್ಯಾಸ–ಚಟ್ನಳ್ಳಿ ಮಹೇಶ್, ಗುರುರಕ್ಷೆ-ಬೇರುಗುಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ತಾರೀಹಳ್ಳಿ ವಿರಕ್ತ ಮಠದ ಬಸಯ್ಯ, ಪತ್ರಕರ್ತ ಮಲ್ಲೇಶ್, ಜಯಶಂಕರಪ್ಪ, ಶಕುಂತಲಾ, ಸುರೇಶ್, ಎ.ಎಸ್.ಬಸವರಾಜು, ಅನ್ನಪೂರ್ಣ ಚಂದ್ರಶೇಖರ್, ಸಂಜಯ್, ಚಂದ್ರು, ವಿರೂಪಾಕ್ಷ, ಉಮೇಶ್ ಲಿಂಗಾಯತ, ಭರತನಾಟ್ಯ-ಸೃಷ್ಟಿ ಗುರುರಾಜ ಕಾಜಗಾರ, ಸಂಗೀತ–ವೀರೇಶ ಕಿತ್ತೂರ, ಸ್ಥಳ–ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ಬೇಲೂರು, ಸಮಯ–ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT