ಮಂಗಳವಾರ, ಆಗಸ್ಟ್ 20, 2019
27 °C
ಕುಡಿಯುವ ನೀರಿನಲ್ಲಿ ಲಾರ್ವಾ ಪರೀಕ್ಷೆ ಶೀಘ್ರ ನಡೆಸಲು ಪ್ರಭಾರಿ ಸಿಇಒ ವೈಶಾಲಿ ಸೂಚನೆ

ರಾಮ್‍ಜಿಹಳ್ಳಿಯಲ್ಲಿ ಐದು ಡೆಂಗಿ ಪ್ರಕರಣ

Published:
Updated:
Prajavani

ಹಾಸನ: ಕುಡಿಯುವ ನೀರಿನಲ್ಲಿ ಲಾರ್ವಾ ಪರೀಕ್ಷೆ ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಲ್.ವೈಶಾಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಡೆಂಗಿ ವಿರೋಧ ಮಾಸಾಚರಣೆ ಹಾಗೂ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಡೆಂಗಿ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅರಸೀಕೆರೆ ತಾಲ್ಲೂಕಿನ ರಾಮ್‍ಜಿಹಳ್ಳಿಯಲ್ಲಿ 5 ಡೆಂಗಿ ಪ್ರಕರಣ ದಾಖಲಾಗಿದ್ದು, ಅಲ್ಲಿನ ನಿವಾಸಿಗಳಿಗೆ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಅಂಬೇಡ್ಕರ್‌ ನಗರ, ಸಿದ್ದಯ್ಯ ನಗರ, ಶ್ರೀನಗರ, ಪೆನ್ಷನ್‌ ಮೊಹಲ್ಲಾಗಳಂತಹ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಡೆಂಗಿ ನಿಯಂತ್ರಣ ಅರಿವು ಕಾರ್ಯಕ್ರಮಗಳು ಆಂದೋಲನದ ರೂಪದಲ್ಲಿ ಮಾಡಬೇಕು. ಇದರಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಸೊಳ್ಳೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿ ಮನೆಯ ಸುತ್ತಮುತ್ತ, ಶಾಲಾ ಆವರಣ ಶುಚಿಯಾಗಿಟ್ಟುಕೊಳ್ಳುವಂತೆ ತಿಳುವಳಿಕೆ ಮೂಡಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ಲಾರ್ವಾ ಸಮೀಕ್ಷೆ ನಡೆಯುವಂತೆ ವಾರ್ಡನ್‍ಗಳಿಗೆ ನಿರ್ದೇಶನ ನೀಡಿದರು.

ಎಳನೀರು, ಟೈರ್‌ಗಳಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಕ್ವಾರೆ ಹಾಗೂ ಈಜು ಕೊಳಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಬೇಕೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದು, ಪ್ರತಿ ಮನೆಗಳಿಗೂ ಆಶಾ ಕಾರ್ಯಕರ್ತೆಯರೂ ಅಂಗನವಾಡಿ ಸಹಾಯಕರ ಜೊತೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ರಾಜಗೋಪಾಲ್ ಮಾತನಾಡಿ, ಕೈಗಾರಿಕೆ ಪ್ರದೇಶದಲ್ಲಿ ಕೆಲಸಗಾರರ ರಕ್ತ ಪರೀಕ್ಷೆ ಮಾಡಿಸುತ್ತಿದ್ದು, ಡೆಂಗಿ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಿಮ್ಸ್‌ ಔಷಧೀಯ ಪ್ರಾಧ್ಯಾಪಕ ಡಾ. ಸುರೇಶ್, ಕ್ಷಯ ರೋಗ ಮತ್ತು ಎಚ್ಐವಿ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ, ತಾಲ್ಲೂಕು ವೈದ್ಯಾಧಿಕಾರಿ ವಿಜಯ್, ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದರು.

Post Comments (+)