ರಸ್ತೆ ಬಿರುಕು, ಸಂಪರ್ಕ ಕಡಿತ

7

ರಸ್ತೆ ಬಿರುಕು, ಸಂಪರ್ಕ ಕಡಿತ

Published:
Updated:
Deccan Herald

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲೂ ಧಾರಾಕಾರವಾಗಿ ಮಳೆ  ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ಅನಾಹುತವಾಗಿದೆ.

ಹೆತ್ತೂರು ಹೋಬಳಿ ಪಟ್ಲ ಬಳಿ ಸಕಲೇಶಪುರ-ಸೋಮವಾರ ಪೇಟೆಗೆ ಸಂಪರ್ಕ ಕಲ್ಪಿಸುವ ಮಾಗೇರಿ ರಸ್ತೆ ನಾಲ್ಕೈದು ಕಡೆ ಭೂ ಕಂಪನವಾದ ರೀತಿಯಲ್ಲಿ ರಸ್ತೆ ಸೀಳು ಬಿಟ್ಟಿದೆ. ಇದರಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣ ಕಡಿತವಾಗಿದೆ.

ಕೊಡಗಿನಲ್ಲೂ ಜೋರು ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಕೆಲವು ಮನೆ ಹಾಗೂ ಶಾಲೆಗಳು ಜಲಾವೃತವಾಗಿವೆ. ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸುರಕ್ಷತೆ ದೃಷ್ಟಿಯಿಂದ ಸಮೀಪದ ಸಮುದಾಯ ಭವನಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ.

ಮಲೆನಾಡು ಭಾಗದಲ್ಲಿ ಜೋರು ಮಳೆ ಆಗುತ್ತಿರುವುದರಿಂದ ಹೇಮಾವತಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, 42.607 ಕ್ಯುಸೆಕ್‌ ಒಳ ಹರಿವಿದ್ದರೆ, 49.750 ಕ್ಯುಸೆಕ್‌ ನೀರನ್ನು 6 ಕ್ರಸ್ಟ್ ಗೇಟ್ ಗಳ ಮೂಲಕ ಹೊರ ಬಿಡಲಾಗುತ್ತಿದೆ.

ಮತ್ತೊಂದೆಡೆ ನಾಲ್ಕು ವರ್ಷಗಳಿಂದ ತುಂಬದೇ ಇದ್ದ ಯಗಚಿ ಜಲಾಶಯ ಸಹ ಭರ್ತಿಯಾಗಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ.

ಅತಿವೃಷ್ಟಿ ಹಾನಿಯ ಬಗ್ಗೆ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ‘ಶಿರಾಡಿಘಾಟ್ ಸೇರಿದಂತೆ ಎಲ್ಲೆಲ್ಲಿ ಹಾನಿಯಾಗಿದೆಯೋ? ಆ ಪ್ರದೇಶಗಳಿಗೆ ಈಗಾಗಲೇ ಇಲಾಖೆ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಜನರಿಗೆ ತೊಂದರೆಯಾಗದಂತೆ ನಿಗಾವಹಿಸಲು ಸೂಚಿಸಲಾಗಿದೆ. ನಾಲ್ಕು ದಿನಗಳ ನಂತರ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗುವುದು’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !