ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸೆ ತಪ್ಪಲ್ಲ. ಆದರೆ...

Last Updated 7 ಏಪ್ರಿಲ್ 2018, 19:37 IST
ಅಕ್ಷರ ಗಾತ್ರ

ಒಂದಾನೊಂದು ಊರಿನ ಪಕ್ಕದ ಬೆಟ್ಟದ ಆಶ್ರಮದಲ್ಲಿ ನಾಲ್ಕಾರು ತಪಸ್ವಿಗಳಿದ್ದರು. ಅವರು ಹಗಲೆಲ್ಲ ವೇದ, ಮಂತ್ರ, ಪುರಾಣ, ಭಗವದ್ಗೀತೆ ಅಧ್ಯಯನ ಮಾಡುತ್ತಲಿದ್ದು ಸಂಜೆ ತಾವಿದ್ದ ಬೆಟ್ಟದ ಮೇಲುಭಾಗಕ್ಕೆ ಹೋಗಿ ಸುಂದರ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರು.

ಹೀಗಿದ್ದಾಗ ದೂರದ ಊರಿನ ಸನ್ಯಾಸಿಯೊಬ್ಬರು ಅವರೊಡನೆ ಬಂದು ಸೇರಿಕೊಂಡರು. ಪರಮ ದಯಾಳುವಾದ ಅವರಿಗೆ ಈ ಆಶ್ರಮದ ಬದುಕು ಹಿತವೆನ್ನಿಸಿ ತಾವೂ ಅವರೊಡನೆಯೇ ವಾಸಿಸತೊಡಗಿದರು.

ಹೀಗಿರಲು ಒಂದು ದಿನ ಉಳಿದ ತಪಸ್ವಿಗಳು ಸೂರ್ಯಾಸ್ತ ನೋಡಲು ಹೊರಟಾಗ ಹೊಸದಾಗಿ ಬಂದು ಸೇರಿದ್ದ ತಪಸ್ವಿಗೆ ತುಸು ಕಾರ್ಯವಿದ್ದ ಕಾರಣ ಹಿಂದಾದರು. ಉಳಿದವರೆಲ್ಲ ಮುಂದೆ ಸಾಗಿದರು. ತಮ್ಮ ಕೆಲಸ ಮುಗಿಸಿದ ಹೊಸ ತಪಸ್ವಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತ ನಿಧಾನವಾಗಿ ಬೆಟ್ಟದ ಮೇಲುಭಾಗಕ್ಕೆ ಹೊರಟರು. ಹಾದಿಯ ಪಕ್ಕದ ಹೊಳೆಯಲ್ಲಿ ಜುಳು ಜುಳು ಹರಿವ ನೀರು ನೋಡುತ್ತ ಬರುವಾಗ ದಾರಿಯ ಪಕ್ಕದ ಗಿಡದಲ್ಲಿ ಕಟ್ಟಿದ್ದ ಕೆಂಪಿರುವೆಗಳ ಗೂಡನ್ನು ಅವರು ಕಾಣಲಿಲ್ಲ. ಅವರ ಉದ್ದನೆಯ ಗಡ್ಡಕ್ಕೆ ನಾಲ್ಕಾರು ಇರುವೆಗಳು ಹತ್ತಿದವು.

ಕೆಂಪಿರುವೆಗಳಿಗೆ ಕೋಪ ಬಲು ಬೇಗ ಬರುತ್ತದೆ. ತಮಗೆ ತೊಂದರೆ ಕೊಡುವವರನ್ನು ಕಚ್ಚಿ ಸೇಡು ತೀರಿಸಿಕೊಳ್ಳುತ್ತವೆ ಕೆಂಪಿರುವೆಗಳು. ಗುಂಪಾಗಿ ಬಂದು ಕಚ್ಚುವಾಗ ಅಪಾರ ನೋವು ಆಗುತ್ತದೆ. ತಪಸ್ವಿಯ ಉದ್ದನೆಯ ದಾಡಿಯ ಮಧ್ಯೆ ಸಿಕ್ಕಿಹಾಕಿಕೊಂಡ ಕೆಂಪಿರುವೆಗಳಿಗೆ ಕಚ್ಚಲು ಶರೀರ ಸಿಗದೆ ಕೂದಲನ್ನೇ ಕಚ್ಚಿದವು. ಕೂದಲ ರಾಶಿಯಲ್ಲಿ ಮೇಲೆ ಕೆಳಕ್ಕೆ ಗಲಿಬಿಲಿಯಿಂದ ಓಡಾಡಿದವು. ಅವುಗಳ ಪರದಾಟ ಗಮನಿಸಿದ ತಪಸ್ವಿಗೆ ಮರುಕವಾಯಿತು.

ಇರುವೆಗಳಿಗೆ ನೆರವಾಗೋಣ ಎಂದು ತಮ್ಮ ಪಕ್ಕದಲ್ಲಿನ ಗಿಡದಲ್ಲಿದ್ದ ಅವುಗಳ ಗೂಡಿನ ಮೇಲೆ ಬಲು ಮೆಲ್ಲನೆ ತಮ್ಮ ದಾಡಿಯನ್ನಿಟ್ಟರು. ಮೆತ್ತಗೆ ಉಸುರಿದರು: ‘ಹಾದಿ ತಪ್ಪಿ ಬಂದ ಮಕ್ಕಳಿರಾ. ನಿಮ್ಮ ಮನೆ ಸೇರಿಕೊಳ್ಳಿ’. ಅರೆಕ್ಷಣದಲ್ಲಿ ನೂರಾರು ಕೆಂಪಿರುವೆಗಳು ಸರಸರನೆ ದಾಡಿ ಹಿಡಿದು ಹತ್ತಿದವು. ಕೆಂಪಿರುವೆಗಳ ಸವಾರಿ ದಾಡಿಯ ಮೇಲೆ ಏರಿತು. ಅಲ್ಲಿಂದ ಇಳಿದು ಕುತ್ತಿಗೆಯ ಭಾಗವನ್ನು ಕಚ್ಚಲಾರಂಭಿಸಿದವು. ದೇಹದ ಒಂದು ಭಾಗವನ್ನೂ ಬಿಡದೆ ಕಚ್ಚಿದವು.

ತಪಸ್ವಿಗೆ ಅರೆಕ್ಷಣ ಏನು ನಡೆಯುತ್ತಿದೆ ಎಂದು ಅರಿವಾಗಲಿಲ್ಲ. ಉರಿ ಸಹಿಸಲಾಗಲಿಲ್ಲ. ದೇಹದ ಎಲ್ಲೆಡೆ ನೋವು, ಸೆಳೆತ. ಮೂಗಿಗೆ ಅಡರುವ ದುರ್ವಾಸನೆ ಬೇರೆ! ಏಕೆ ಇವು ಉಗ್ರ ಕೋಪದಿಂದ ಕಚ್ಚುತ್ತಿವೆ ಎಂದರಿವಾಗಲಿಲ್ಲ. ‘ಅಯ್ಯೋ! ದಾರಿ ತಪ್ಪಿದ ಮರಿಗಳಿಗೆ ಅವುಗಳ ಗೂಡಿಗೆ ದಾಟಿಕೊಳ್ಳಲು ನೆರವಾದೆ. ನಾನು ಇನಿತೂ ನೋವು ಮಾಡಲಿಲ್ಲ! ಯಾಕಿಷ್ಟು ಸಿಟ್ಟು’ ಎಂದು ಯೋಚಿಸಿದರು.

ಸೋತುಹೋದ ತಪಸ್ವಿಗೆ ಅವುಗಳನ್ನು ಕಿತ್ತು ಹಾಕಲು ಕೈಬರಲಿಲ್ಲ. ಇರುವೆಗಳಿಗೆ ಹಿಂಸೆ ಆಗಿ ಸಂಕಟಪಡಬಹುದು. ತಾವಾಗೇ ಅವು ಇಳಿಯಲಿ ಎಂದು ಕಾದರು. ಆಗ ಇನ್ನಷ್ಟು ಕಚ್ಚಿದವು ಕೆಂಪಿರುವೆಗಳು. ತಪಸ್ವಿಗೆ ಉರಿ ಸಹಿಸಲಾಗದೆ, ಆರ್ತನಾದಗೈದರು.

ಅದಾಗಲೇ ಸೂರ್ಯಾಸ್ತ ವೀಕ್ಷಿಸಲು ಸೇರಿದ್ದ ಉಳಿದ ತಪಸ್ವಿಗಳು, ಹೊಸದಾಗಿ ಬಂದ ತಪಸ್ವಿ ಯಾಕಿನ್ನೂ ಕಾಣುತ್ತಿಲ್ಲ; ಬೇಗನೆ ಬರುವುದಾಗಿ ಹೇಳಿದ್ದರಲ್ಲ ಎಂದು ನೋಡುತ್ತಲಿದ್ದರು. ಆಗ ಆರ್ತನಾದ ಕೇಳಿಸಿತು. ಏನೋ ಅಪಾಯವೊದಗಿದೆ ಅವರಿಗೆ ಎಂದು ಅರ್ಥವಾಯಿತು. ಅವರೆಲ್ಲ ಧಾವಿಸಿ ಬಂದರು. ಬಂದು ನೋಡುವ ಹೊತ್ತಿಗೆ ಅವನ ಮೈತುಂಬಾ ಓಡಾಡುತ್ತಿದ್ದ ಕೆಂಪಿರುವೆಗಳನ್ನು ಕಂಡರು.

ತಪಸ್ವಿಯ ಕಣ್ಣಿಂದ ಅಶ್ರುಧಾರೆ ಇಳಿಯುತ್ತಿತ್ತು. ತಾವು ಕೈಹಾಕಿ ಬಿಡಿಸತೊಡಗಿದ್ದೇ ಆದರೆ ಅವು ತಮ್ಮ ಮೇಲೂ ಧಾಳಿ ಮಾಡುತ್ತವೆ ಎಂದು ಗೊತ್ತಿದ್ದ ಉಳಿದ ತಪಸ್ವಿಗಳು ಕಿರಿಯ ತಪಸ್ವಿಯನ್ನು ಮುಟ್ಟಲಿಲ್ಲ. ಹಾದಿಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಗೆ ಇಳಿಯಲು ಸೂಚಿಸಿದರು. ಎಲ್ಲರೂ ಒಕ್ಕೊರಲಿನಿಂದ ನೀರಿಗೆ ಇಳಿಯಲು ಹೇಳಿದಾಗ ಕಿರಿಯ ತಪಸ್ವಿ ಹಾಗೇ ಮಾಡಿದರು. ಅಲ್ಲಿ ಕೊರಳ ತನಕ ಬರುವ ನೀರಿನಲ್ಲಿ ನಿಂತರು. ದಾಡಿಯನ್ನೂ ನೀರಿನಲ್ಲಿ ಮುಳುಗಿಸಿದರು. ಆಗ ಕೆಂಪಿರುವೆಗಳು ತಪಸ್ವಿಯ ಮೈಯನ್ನು, ದಾಡಿಯನ್ನು ಬಿಟ್ಟು ನೀರಿನಲ್ಲಿ ತೇಲಿದವು. ತಲೆಯನ್ನೂ ನೀರಿನಲ್ಲಿ ಮುಳುಗಿಸತೊಡಗಿದರು. ಎಲ್ಲ ಇರುವೆಗಳೂ ಅವರ ಶರೀರವನ್ನು ಬಿಟ್ಟು ನೀರಿನಲ್ಲಿ ತೇಲಿದವು. ಉಸ್ಸೆಂದು ನಿಟ್ಟುಸಿರಿಡುತ್ತ ನೀರಿಂದ ಮೇಲೆದ್ದು ಬಂದ ಕಿರಿಯ ತಪಸ್ವಿಗೆ ಬದುಕಿದೆಯಾ ಬಡಜೀವವೇ ಎನ್ನುವ ಹಾಗಾಯ್ತು. ‘ಏನಾಯ್ತು ನಿಮಗೆ? ನಡೆಯಲಾಗುತ್ತದಾ?’ ಎಂದು ಉಳಿದವರು ಪ್ರಶ್ನಿಸಿದರು ಗಾಬರಿಯಿಂದ.

‘ಪಾಪದ ಕೆಂಪಿರುವೆಗಳೆಲ್ಲ ನೀರಿನಲ್ಲಿ ತೇಲಿ ಹೋದವು. ನನಗೆ ಕಚ್ಚಿದ್ದಕ್ಕೆ ನಾನು ಅವುಗಳ ಜೀವ ತೆಗೆದೆನಲ್ಲ. ಅದೇ ಬೇಸರ’ ಎಂದು ನೊಂದು ನುಡಿದರು ಕಿರಿಯ ತಪಸ್ವಿ. ಅವರಿಗಾದ ದುಃಖವನ್ನು ಕಂಡ ಇತರ ತಪಸ್ವಿಗಳಿಗೆ ನಗು ತಡೆಯಲಾಗಲಿಲ್ಲ. ‘ನಿಮಗೆ ನಮ್ಮ ಕಡೆಯ ಕೆಂಪಿರುವೆಗಳ ಬಗ್ಗೆ ತಿಳಿದಿಲ್ಲ. ಅವು ಬಲು ಬುದ್ಧಿವಂತ ಜೀವಿಗಳು. ತಮ್ಮ ವಾಸಸ್ಥಾನವನ್ನು ಎಲ್ಲಿದ್ದರೂ ಅದರ ವಾಸನೆಯಿಂದ ಕಂಡು ಹಿಡಿದು ಹಿಂದಿರುಗಿ ಬರುತ್ತವೆ. ಅವು ಮುಳುಗುವುದಿಲ್ಲ, ದಾರಿಯ ಪಕ್ಕದ ಪೊದೆ, ಗಿಡ, ಮರದ ತುಂಡುಗಳನ್ನು ಹಿಡಿದು ಹತ್ತಿ, ಹಿಂದೆ ಬರುತ್ತವೆ. ತಮ್ಮ ರಕ್ಷಣೆ ಅವಕ್ಕೆ ಗೊತ್ತಿದೆ’ ಎಂದರು.

ಅವರಲ್ಲಿನ ಹಿರಿಯ ಯತಿಗಳಿಗೆ ಕೆಂಪಿರುವೆಗಳ ಸ್ವಭಾವ ಚೆನ್ನಾಗಿ ತಿಳಿದಿತ್ತು. ತಮ್ಮ ಮೆಲೆ ಆಕ್ರಮಣವಾಗದ ಹೊರತು ಅವು ಇನ್ನೊಬ್ಬರಿಗೆ ತೊಂದರೆ ಕೊಡುವುದಿಲ್ಲ. ‘ತಮ್ಮಷ್ಟಕ್ಕೆ ಗೂಡಿನಲ್ಲಿದ್ದ ಅವು ಹೀಗೆ ಘೋರವಾಗಿ ಹಿಂಸಿಸಬೇಕಾದರೆ ಅಲ್ಲಿ ತಪ್ಪೇನಾದರೂ ಆಗಿದೆಯೇನು?’ ಎಂದು ಆಲೋಚಿಸಿ, ಕಿರಿಯರಲ್ಲಿ ‘ಇವೆಲ್ಲ ಹೇಗಾಯಿತು’ ಎಂದು ವಿಚಾರಿಸಿದರು.

ಆಗ ಅವರು ದಾರಿಯಲ್ಲಿ ನಡೆದು ಬರುತ್ತಿದ್ದಾಗ ತಮ್ಮ ಗಡ್ದ ಗಿಡದ ಗೂಡಿಗೆ ತಾಗಿದ ಒಡನೆ ನಾಲ್ಕಾರು ಇರುವೆಗಳು ಸರಸರನೆ ತಮ್ಮ ಗಡ್ದಕ್ಕೆ ಹತ್ತಿದ್ದನ್ನು ಹೇಳಿದರು. ನೀಳವಾದ ಕೂದಲಿನಲ್ಲಿ ಸಿಲುಕಿ ಅಸಹಾಯಕವಾಗಿ ಅತ್ತಿತ್ತ ಚಡಪಡಿಸುತ್ತ ಓಡಾಡುವ ಅವುಗಳನ್ನು ಅವಕ್ಕೆ ನೋವಾಗದ ಹಾಗೆ ಅವುಗಳ ಮನೆಯಲ್ಲಿ ಬಿಡುವ ಉದ್ದೇಶದಿಂದ ಗಡ್ಡವನ್ನೆತ್ತಿ, ಇರುವೆಗಳು ತುಂಬಿದ ಗೂಡಿನಲ್ಲಿ ತುಸು ಹೊತ್ತು ಇಟ್ಟುದನ್ನು ತಿಳಿಸಿದರು. ಆದರೆ ಅವು ಮರಳಿ ಹೋಗದೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮೇಲೆರಗಿ ಹಿಗ್ಗಾಮುಗ್ಗಾ ಕಚ್ಚಿ ಹಿಂಸಿಸಿದವು; ಪರೋಪಕಾರ ಮಾಡಲು ಹೋಗಿದ್ದೇ ತಪ್ಪೆಂದು ಅವುಗಳು ಭಾವಿಸಿದವು ಎಂದರು. ಆಗ ಹಿರಿಯ ತಪಸ್ವಿಗೆ ನಗು ಉಕ್ಕಿತು.

‘ಅಹಿಂಸೆ ತಪ್ಪಲ್ಲ; ಪರೋಪಕಾರವೂ ಸರಿಯೇ. ಆದರೆ ಒಮ್ಮೆಗೇ ತಮ್ಮ ಗೂಡಿಗೆ ಮಾನವನ ಗಡ್ಡ ತಗುಲಿದಾಗ, ಕೆಂಪಿರುವೆಗಳು ಅದು ತಮಗೆ ಬಂದ ವಿಪತ್ತು ಎಂದು ಅರ್ಥಮಾಡಿಕೊಂಡವು. ಬದುಕಿಗಾಗಿ ಹೋರಾಟ ನಡೆಸಿವೆ ಅವು. ನೀವಾಗಿ ಅವರ ಗೂಡಿಗೆ ದಾಡಿ ಇರಿಸಿದ್ದು ಅವಕ್ಕೆ ತೊಂದರೆ ಕೊಡಲು ಎಂದು ತಿಳಿದವು. ಬದಲಾಗಿ ಗಡ್ದಕ್ಕೆ ಹತ್ತಿದ ನಾಲ್ಕು ಇರುವೆಗಳನ್ನು ಮೆತ್ತಗೆ ಬಿಡಿಸಿ ನೆಲದಲ್ಲಿ ಬಿಟ್ಟಿದ್ದರೆ ಅವು ಸುರಕ್ಷಿತವಾಗಿ ತಮ್ಮ ನೆಲೆ ತಲುಪಿಕೊಳ್ಳುತ್ತಿದ್ದವು. ಇದು ನಿಮ್ಮಿಂದ ತಿಳಿಯದೆ ಆಗಿಹೋದ ಕಾರಣ ಇನ್ನುಮುಂದೆ ಜಾಗರೂಕವಾಗಿರಿ’ ಎಂದು ಹಿತವಚನ ಹೇಳಿದರು. ಕಿರಿಯ ತಪಸ್ವಿಗಳಿಗೆ ತಮ್ಮ ಅಜ್ಞಾನ ಕಂಡು ನಾಚಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT