ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ಅನುಷ್ಠಾನದಲ್ಲಿ ಲೋಪ: ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚನೆ

ವಸತಿ ಯೋಜನೆ ಅನುಷ್ಠಾನದಲ್ಲಿ ಲೋಪ: ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಕೆ
Last Updated 11 ಸೆಪ್ಟೆಂಬರ್ 2020, 16:00 IST
ಅಕ್ಷರ ಗಾತ್ರ

ಹಾಸನ: ವಸತಿ ಯೋಜನೆಗಳ ಅನುಷ್ಠಾನದಲ್ಲಿ ಲೋಪ ಎಸಗುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಕೇಳಿ ಬರುತ್ತಿದೆ. ಅನೇಕ ಕಡೆ ಒಂದೇ ಮನೆಗೆ ಎರಡು ಬಾರಿ ಬಿಲ್‌ ನೀಡಲಾಗಿದೆ. ದನದ ಕೊಟ್ಟಿಗೆಗೂ ಬಿಲ್‌ ನೀಡಿದ್ದಾರೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದರು.

ರಾಜ್ಯದಲ್ಲಿ ವಿವಿದ ವಸತಿ 9 ಲಕ್ಷ ಮನೆಗಳಿಗೆ ಅನುಮೋದನೆಯಾಗಿದ್ದು, ಜಿ.ಪಿ.ಎಸ್ ಆಗಿರುವ ನಿವಾಸಗಳಿಗೆ
ಪ್ರಗತಿ ಅನುಸಾರ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಫಲಾನುಭವಿಗಳ ಆಯ್ಕೆಯಲ್ಲಿ ಸ್ಥಳೀಯ ಶಾಸಕರ ನಿರ್ಧಾರವೇ ಅಂತಿಮವಾಗಿದೆ. ಹಳೇ ಯೋಜನೆಗಳು ಪೂರ್ಣಗೊಳ್ಳದೆ ಹೊಸ ಮಂಜೂರಾತಿ ನೀಡುತ್ತಿಲ್ಲ.
ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಹೊಸದಾಗಿ 65 ಸಾವಿರ ಮನೆಗಳ ನಿರ್ಮಾಣಕ್ಕೆ ಅವಕಾಶ ಇದ್ದು, ಎಲ್ಲೆಲ್ಲಿ ನೈಜ ಅವಶ್ಯಕತೆಗಳಿದೆಯೋ ಅಲ್ಲಿಗೆ ಮಂಜೂರಾತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಹೊಸದಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುವು ಮಾಡಿ ನೀಡುವ ಮನೆಗಳಿಗೆ ನಗರದ ಪ್ರದೇಶದಲ್ಲಿ ₹3.50 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ ₹.2.7 ಲಕ್ಷ ನೀಡಲಾಗುವುದು. ಇವುಗಳ ಕಾಮಗಾರಿ 11 ತಿಂಗಳಲ್ಲಿ
ಮುಗಿಯಬೇಕು ಎಂದು ಸಚಿವರು ಹೇಳಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಕೊಳಗೇರಿ ನಿವಾಸಗಳಿಗೆ ಪೂರಕ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ 800 ನಿವೇಶನಗಳ ಹಂಚಿಕೆ ಮಾಡಿ 10 ವರ್ಷ ಕಳೆದರೂ ಬಹುತೇಕರು ಮನೆ ನಿರ್ಮಾಣ ಮಾಡಿಲ್ಲ. ಅಂತಹ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ನಿಜವಾದ ಫಲಾನುಭವಿಗಳಿಗೆ ಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಗೆ 20 ಮನೆಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಮಾರ್ಗಸೂಚಿ ಪ್ರಕಾರ ಶೇಕಡಾ 60 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಶೇಕಡಾ 15ರಷ್ಟು ಅಲ್ಪ ಸಂಖ್ಯಾತರರಿಗೆ ಮತ್ತು ಶೇಕಡಾ 25 ರಷ್ಟು ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಬೇಕು. ಅನೇಕ ಕಡೆ ಅಷ್ಟು ಪ್ರಮಾಣದಲ್ಲಿ ಆಯಾ ಸಮುದಾಯದವರು ಇರುವುದಿಲ್ಲ. ಆದ್ದರಿಂದ ಮಾರ್ಗಸೂಚಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಮನೆಗಳಿಗೆ ಅನುದಾನ ಬಿಡುಗಡೆಯಾಗದೆ ಕಾಮಗಾರಿಗಳು ಅರ್ಧಕ್ಕೆ
ನಿಂತಿವೆ. ಎಷ್ಟೋ ಜನ ಬಡ್ಡಿಗೆ ಹಣ ಪಡೆದು ಮನೆ ನಿರ್ಮಿಸಿದ್ದಾರೆ. ಮಂಜೂರಾಗಿರುವ ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಳೆಯದನ್ನು ಪರಿಶೀಲಿಸಲು ಹೋದರೆ ಅದೊಂದು ಬ್ರಹ್ಮಾಂಡ. ಈಗ ಪ್ರತಿ ಗ್ರಾಮ
ಪಂಚಾಯಿತಿಗೆ ನೀಡಿರುವ 20 ಮನೆಗಳನ್ನು ಲೋಪ ಇಲ್ಲದೆ ಹಂಚಿಕೆ ಆಗಬೇಕು. ಹಿಂದಿನ ಯೋಜನೆಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡಲಾಗುವುದು. 1.20 ಲಕ್ಷ ಜನರಿಗೆ ನಿವೇಶನ ಹಂಚಿಕೆ ಮಾಡಲು ₹8,500 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮೋದನೆ ಸಿಕ್ಕಬಳಿಕ ನಿವೇಶನ ಹಂಚಿಕೆ
ಮಾಡಲಾಗುವುದು’ ಎಂದು ಉತ್ತರಿಸಿದರು.

ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ಹಾಸನ ನಗರಕ್ಕೆ 1000 ಮನೆಗಳನ್ನು ಮಂಜೂರು ಮಾಡಲಾಗಿದೆ. 6.20 ಎಕರೆ ಜಾಗದಲ್ಲಿ ಬಹು ಅಂತಸ್ತಿನ 768 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು. ಇನ್ನೂ 2500 ಮನೆಗಳನ್ನು ನಗರ ವಸತಿ ಯೋಜನೆಯಡಿ ಒದಗಿಸಿದ್ದಲ್ಲಿ ನಗರ ಪ್ರದೇಶದ ಎಲ್ಲಾ ವಸತಿ ರಹಿತರಿಗೆ ಮನೆಗಳ ಸೌಲಭ್ಯ
ಒದಗಿಸಲಾಗುವುದು ಎಂದರು.

ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡುಗಳಲ್ಲಿ ಹೆಚ್ಚು ಮಳೆ ಬಿಳುವ ಪ್ರದೇಶಗಳಾಗಿದ್ದು, ಅಲ್ಲಿ ಇತರ ಜಿಲ್ಲೆಗಳಲ್ಲಿ ಮಲೆನಾಡು ಭಾಗಕ್ಕೆ ನೀಡಿರುವ ರಿಯಾಯಿತಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಕೆ.ಎಸ್. ಲಿಂಗೇಶ್‌, ಸಿ.ಎನ್‌.ಬಾಲಕೃಷ್ಣ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ವಸತಿ ಯೋಜನೆಗಳು, ಅಕ್ರಮ ಬಡವಣೆಗಳ ನಿರ್ಮಾಣಕ್ಕೆ ಹಾಕಿರುವ ನಿಯಂತ್ರಣಗಳು ಮತ್ತು ಗ್ರಾಮೀಣ ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿಗಳಾದ ನವೀನ್ ಭಟ್, ಗಿರೀಶ್ ನಂದನ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ
ನಾಗರಾಜ್, ಆಡಳಿತ ಉಪ ಕಾರ್ಯದರ್ಶಿ ಚಂದ್ರಶೇಖರ್, ಅಭಿವೃದ್ಧಿ ಉಪ ಕಾರ್ಯದರ್ಶಿ ಮಹೇಶ್ ಹಾಜರಿದ್ದರು. ‌
‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT