ಶುಕ್ರವಾರ, ಜುಲೈ 30, 2021
28 °C
ಸೋನೆ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿ

ತಗ್ಗಿದ ವರುಣನ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು, ನಗರ ಸೇರಿದಂತೆ ವಿವಿಧೆಡೆ ಜಿಟಿಜಿಟಿ ಮಳೆಯಾಗುತ್ತಿದೆ.

ನಗರದಲ್ಲಿ ಶುಕ್ರವಾರ ಬೆಳಗ್ಗೆ ಎರಡು ತಾಸು ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ನಂತರ ಮತ್ತೆ ಜಿಟಿಜಿಟಿ ಮಳೆಯಾಯಿತು. ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶಗಳಲ್ಲಿರುವ ಬಡಾವಣೆಗಳ ರಸ್ತೆಗಳಲ್ಲಿ ನೀರು ನಿಂತಿದ್ದು, ವಸತಿ ಪ್ರದೇಶಗಳಲ್ಲಿನ ರಸ್ತೆಗಳು ಗುಂಡಿ ಬಿದ್ದಿವೆ.

ಬಿರುಗಾಳಿಗೆ ಅಲ್ಲಲ್ಲಿ ಮರದ ರೆಂಬೆ–ಕೊಂಬೆಗಳು ಮುರಿದು ಬಿದ್ದಿದ್ದು, ಯಾವುದೇ ಅಪಾಯವಾಗಿಲ್ಲ. ಕೆರೆ, ಕಟ್ಟೆಗಳು, ಹಳ್ಳ,ಕೊಳ್ಳಗಳು ತುಂಬಿವೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಲೆನಾಡು ಪ್ರದೇಶ ಸಕಲೇಶಪುರ, ಆಲೂರು ಭಾಗದಲ್ಲಿ ಕಾಫಿ, ಅಡಿಕೆ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ಮಲೆನಾಡು ಭಾಗದ ರೈತರು ವರುಣ ಆರ್ಭಟದಿಂದ ಕೆಂಗೆಟ್ಟು ಬೆಳೆ, ಆಸ್ತಿಪಾಸ್ತಿ ನಷ್ಟದಲ್ಲಿ  ಭೀತಿಯಲ್ಲಿ ಸಿಲುಕಿದ್ದಾರೆ. ಅರೆ ಮಲೆನಾಡು ಹಾಗೂ ಬಯಲು ಸೀಮೆಯ ರೈತರಲ್ಲಿ ಮಳೆ ಮಂದಹಾಸ ಮೂಡಿಸಿದೆ. ಮಳೆ ಕೊರತೆ ಎದುರಿಸುತ್ತಿದ್ದ ಆಲೂಗಡ್ಡೆ, ಜೋಳ ಹಾಗೂ ತೋಟಗಾರಿಕೆ ಬೆಳೆಗಳಿಗೆ ಮಳೆ ಸಂಜೀವಿನಿಯಾಗಿದೆ.

 ಅರಕಲಗೂಡು, ಕೊಣನೂರು, ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಸೋನೆ ಮಳೆಯಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಜಡಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನ ಹೊರ ಬಾರಲಾಗದೆ ಮನೆಯಲ್ಲೇ ಉಳಿಯುವಂತಾಗಿದೆ.

ಸೋನೆ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದ್ದು, ಬಿತ್ತನೆ ಕಾರ್ಯ ವಿಳಂಬವಾಗುತ್ತಿದೆ. ಜಮೀನು ಹದಗೊಳಿಸಲು ಸಾಧ್ಯವಾಗದೆ ರೈತರು ಹೈರಾಣಾಗಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಹೆಸರು, ಉದ್ದು, ಅಲಸಂದೆ ಫಸಲು ಬಂದಿದ್ದು,  ಕಾಯಿ–ತಳ್ಳು ಬಿಡಿಸಿ ಒಕ್ಕಣೆ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಫಸಲು ಸೋನೆ ಮಳೆಗೆ ಸಿಲುಕಿ ಹಾಳಾಗುತ್ತಿದೆ’ ಎಂದು ಚನ್ನರಾಯಪಟ್ಟಣದ ರೈತ ಮಂಜಣ್ಣ ಅಳಲು ತೋಡಿಕೊಂಡರು.

ಜಲಾನಯನ ಪ್ರದೇಶಗಳಾದ ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ನಿರಂತರ ಮಳೆಯಿಂದಾಗಿ  ಹೇಮಾವತಿ ಜಲಾಶಯದ ಒಳ ಹರಿವು 16 ಸಾವಿರ ಕ್ಯುಸೆಕ್‌ಗೆ ಏರಿಕೆ ಆಗಿದೆ. ಯಗಚಿ ಜಲಾಶಯ ಭರ್ತಿಯಾಗಿದ್ದು, ಐದು ಕ್ರಸ್ಟ್‌ ಗೇಟ್‌ಗಳ ಮೂಲಕ ನದಿಗೆ 1,200 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ರಾಮನಾಥಪುರದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು