ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ, ನಿವೇಶನ ಮಂಜೂರಾತಿಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಬೇಲೂರಿನ ಹಾಲ್ತೊರೆ ಗ್ರಾಮಸ್ಥರ ಧರಣಿ
Last Updated 21 ಮಾರ್ಚ್ 2022, 15:48 IST
ಅಕ್ಷರ ಗಾತ್ರ

ಹಾಸನ: ವಸತಿ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಮಂಜೂರು ಮಾಡಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೇಲೂರು ತಾಲ್ಲೂಕಿನ ಹಾಲ್ತೊರೆ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೂರು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾದಿಹಳ್ಳಿ ಹೋಬಳಿಯ ಹಾಲ್ತೊರೆ ಗ್ರಾಮದ ಪರಿಶಿಷ್ಟ ಸಮುದಾಯದ 19, ಇತರೆ ಹಿಂದುಳಿದ ವರ್ಗದ ಮೂವರು ಸೇರಿದಂತೆ ಒಟ್ಟು 22 ಕುಟುಂಬಗಳು ಆ ಪ್ರದೇಶದಲ್ಲಿ ಯಗಚಿ ನಾಲೆ ಬಂದ ಕಾರಣ ಮನೆ ಕಳೆದುಕೊಂಡು ಮುಳುಗಡೆ ಸಂತ್ರಸ್ತರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಜಿ.ಪೃಥ್ವಿ ಮಾತನಾಡಿ ‘ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರು ಎಂದು ಗುರುತಿಸಿ ರಾಜ್ಯ ಸರ್ಕಾರದ ಆಶ್ರಯ ಯೋಜನೆಯಡಿ 1991ರಲ್ಲಿ ತಲಾ 30x40 ಅಳತೆಯ ನಿವೇಶನಗಳ ಹಕ್ಕುಪತ್ರಗಳನ್ನು ಹಾಲ್ತೊರೆ ಗ್ರಾಮದ ಸರ್ವೆ ನಂಬರ್‌ 166ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ನೀಡಲಾಗಿದೆ’ ಎಂದು ತಿಳಿಸಿದರು.

‘ಅದೇ ಸರ್ವೆ ನಂಬರ್‌ನಲ್ಲಿ ನಿವೇಶನ ಗಳಿಗಾಗಿ ಭೂಮಿ ಕಾಯ್ದಿರಿಸಲಾಗಿದೆ. ಆದರೆ, ಇದುವರೆಗೂ ಆ ಭೂಮಿಯಲ್ಲಿ ನಿವೇಶನಕ್ಕಾಗಿ ಜಾಗ ಗುರುತು ಮಾಡಿ ಪರಿಶಿಷ್ಟ ಮತ್ತು ಹಿಂದುಳಿದ ವರ್ಗದ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿ ವಸತಿ ನಿರ್ಮಿಸಿ ಕೊಡಲು ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಮಾಡಿದೆ. ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿ, ಅತಂತ್ರ ಸ್ಥಿತಿಗೆ ತಲುಪಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನೆ, ನಿವೇಶನ, ಭೂಮಿ ಮಂಜೂರು ಮಾಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ, ನಿವೇಶನ ರಹಿತರಿಗೆ ಕಾಯ್ದಿರಿಸಿರುವ ಭೂಮಿಯಲ್ಲಿಯೇ ಅದೇ ಗ್ರಾಮದ ಮೇಲ್ದಾತಿಯ ಇಬ್ಬರಿಗೆ ಕೃಷಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.

ವಿವಿಧ ವಸತಿ ಯೋಜನೆಯಡಿ ಸುಸಜ್ಜಿತ ಮನೆ ನಿರ್ಮಿಸಿಕೊಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಎಚ್.ಕೆ.ಸಂದೇಶ್, ಮುಖಂಡರಾದ ರಾಜಶೇಖರ್, ಕೃಷ್ಣದಾಸ್, ಎಸ್.ಎನ್.ಮಲ್ಲಪ್ಪ, ಧರ್ಮೇಶ್, ಟಿ.ಆರ್.ವಿಜಯಕುಮಾರ್, ರಾಜು ಸಿಗರನಹಳ್ಳಿ, ರಮೇಶ್, ರವೀಶ್, ಮರಿ ಜೋಸೆಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT