ಶುಕ್ರವಾರ, ಸೆಪ್ಟೆಂಬರ್ 17, 2021
21 °C
ಸಕಲೇಶಪುರದಲ್ಲಿ ನಡೆದ ಕಾಫಿ ಕೃಷಿ ಮೇಳ, ‘ಕಾಫಿ ಹಬ್ಬ’ ಕಾರ್ಯಕ್ರಮ

ಬಡ್ಡಿ ಮನ್ನಾಕ್ಕೆ ಒಕ್ಕೂಟದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ‘ಅತಿವೃಷ್ಟಿ, ಅನಾವೃಷ್ಟಿ, ರೋಗ ಬಾಧೆ, ಕಾಡಾನೆ ಹಾವಳಿ ಹಾಗೂ ಬೆಲೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಪರಿಹಾರಕ್ಕೆ ಪೂರಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್) ವತಿಯಿಂದ ಆಯೋಜಿಸಿದ್ದ ಕಾಫಿ ಕೃಷಿ ಮೇಳ ಹಾಗೂ ‘ಕಾಫಿ ಹಬ್ಬ’ ಕಾರ್ಯಕ್ರಮಕ್ಕೆ ಗೈರಾದರೂ ವಿಧಾನಸೌಧದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿರುವ ಕಾಫಿ ಉದ್ದಿಮೆ, ಇಂದು ಹತ್ತಾರು ಸಮಸ್ಯೆಗಳಿಗೆ ಸಿಲುಕಿ ಬೆಳೆಗಾರರು ಚೇತರಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ನಲುಗಿ ಹೋಗಿದ್ದಾರೆ. ಎರಡು ದಶಕಗಳ ಹಿಂದೆ ಕಾಫಿ ಬೆಳೆಗಾರರು ಎನ್ನುವುದಕ್ಕೆ ಹೆಮ್ಮೆ ಪಡುತ್ತಿದ್ದವರು ಈಗ ಸಾಲಗಾರರು ಎಂಬುವಷ್ಟು ಕೀಳರಿಮೆ ಹುಟ್ಟುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಫಿ ಉದ್ದಿಮೆ ಉಳಿಸಿಕೊಳ್ಳಲು ಸಾಮೂಹಿಕ ಪ್ರಯತ್ನ ಮಾಡಬೇಕಿದೆ. ಇದಕ್ಕೆ ನಾನೂ ಕೈಜೋಡಿಸುವೆ’ ಎಂದರು.

ರಾಜ್ಯ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್ ಮಾತನಾಡಿ, ‌‘ಕಾಫಿ ಬೆಳೆಗಾರರು ಶ್ರೀಮಂತರು ಎನ್ನುವ ಅಭಿಪ್ರಾಯ ಹಾಗೂ ಸಂಪ್ರದಾಯ ಸಮಾಜದಲ್ಲಿ ಇಂದಿಗೂ ಇದೆ. ಎರಡು ದಶಕಗಳಿಂದ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಒಕ್ಕೂಟ ಸಾಕಷ್ಟು ಕಾರ್ಯಗಳನ್ನು ಮಾಡಿದೆ’ ಎಂದರು

‘ಅತಿವೃಷ್ಟಿ, ಅನಾವೃಷ್ಟಿ, ಆನೆ ಹಾವಳಿಗೆ ಹಾಗೂ ಇತರೆ ಅನೇಕ ಸಮಸ್ಯೆಗಳಿಗೆ ಸಿಲುಕಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಒಟ್ಟು ₹10 ಸಾವಿರ ಕೋಟಿ ಬ್ಯಾಂಕ್ ಸಾಲ ಇದ್ದು, ಇದರಲ್ಲಿ ಸುಮಾರು 1,200 ಕೋಟಿ ಬಡ್ಡಿಯನ್ನು ಕಾಫಿ ಬೆಳೆಗಾರರು ಕಟ್ಟಬೇಕಾಗಿದೆ. ಈ ಬಡ್ಡಿಯನ್ನು ಮನ್ನಾ ಮಾಡಬೇಕು, ಬಡ್ಡಿ ದರ ಕಡಿಮೆ ಮಾಡಬೇಕು ಹಾಗೂ ಇತರೆ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ‘ಕಾಫಿ ಬೆಳೆಗಾರರು ಮತ್ತು ಉದ್ದಿಮೆಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ, ಆದರೆ ಇಲ್ಲಿನ ಕಷ್ಟ, ನಷ್ಟ ಮತ್ತು ಸಮಸ್ಯೆಗಳಿಗೆ ತಕ್ಕ ಪರಿಹಾರ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಕಾಫಿ ಬೆಳೆಯುವ ಮಲೆನಾಡಿನ ಪ್ರತಿ ಮನೆ ಹಾಗೂ ಹೋಟೆಲ್‌ಗಳಲ್ಲಿ ಟೀ ಬದಲಿಗೆ ಕಾಫಿಯನ್ನೇ ಕುಡಿಯಬೇಕು ಹಾಗೂ ಅತಿಥಿಗಳಿಗೂ ನೀಡಬೇಕು ಇಂತಹ ಸಂಪ್ರದಾಯ ಬೆಳೆಸಿಕೊಂಡರೆ ಆಂತರಿಕ ಬೇಡಿಕೆ ಹೆಚ್ಚಿಸಿಕೊಳ್ಳಬಹುದು’ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿದರು.

ಕಾಫಿ ತಯಾರಿಕೆಯಲ್ಲಿ ಹೆಸರು ಮಾಡಿರುವ ಶುಶಾಂತ್‌ ಚಂಗಡಿಹಳ್ಳಿ ಅವರು ವೇದಿಕೆಯಲ್ಲಿ ಕಾಫಿ ಪ್ರಾತ್ಯಕ್ಷಿಕೆ ನೀಡಿದರು.

ಸಭಾಂಗಣದಲ್ಲಿ ವೈಜ್ಞಾನಿಕ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ಕಾಫಿ ಮಂಡಳಿ ಅಧ್ಯಕ್ಷ ಬೋಜೆಗೌಡ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅತ್ತಿಕಟ್ಟೆ ಜಗನ್ನಾಥ್, ಡಾ. ಎನ್‌.ಕೆ. ಪ್ರದೀಪ್, ಉಪಾಧ್ಯಕ್ಷ ಎಚ್.ಎಚ್‌. ಉದಯ್, ಖಜಾಂಚಿ ಮಹೇಶ್, ಮಹಿಳಾ ಕಾಫಿ ಪ್ರಮೋಷನಲ್‌ ಕೌನ್ಸಿಲ್‌ ಅಧ್ಯಕ್ಷೆ ಕರುಣಾ ಕಿರಣ್‌, ಎಚ್‌ಡಿಪಿಎ ಉಪಾಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು