ಶುಕ್ರವಾರ, ಅಕ್ಟೋಬರ್ 22, 2021
21 °C
ಜಿಲ್ಲಾಧಿಕಾರಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ಮನವಿ

ಹಾಸನ: ಮೀಸಲಾತಿ ಗೊಂದಲ ಸರಿಪಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮೀಸಲಾತಿ ಗೊಂದಲದಿಂದ ನವೋದಯ ವಿದ್ಯಾಲಯ ಪರೀಕ್ಷೆಯಲ್ಲಿ ಆಯ್ಕೆಯಾದ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆ ಬಗೆಹರಿಸಬೇಕು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಆಗ್ರಹಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಸದಸ್ಯರು, ನವೋದಯ ವಿದ್ಯಾಲಯ ಸಮಿತಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪೈಕಿ ಜಿಲ್ಲೆಯ 90 ವಿದ್ಯಾರ್ಥಿಗಳು ವೀರಶೈವ ಸಮುದಾಯಕ್ಕೆ ಸೇರಿದ್ದಾರೆ. ಶೇಕಡಾ 27 ಒಬಿಸಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಸರ್ಕಾರ ಒಬಿಸಿ-3 ವರ್ಗಕ್ಕೆ ಸೇರಿಸಿದೆ (ಕೆಲವೊಂದು ಉಪ ಪಂಗಡ ಹೊರತು ಪಡಿಸಿ). ಆದರೆ, ಕೇಂದ್ರ ಸರ್ಕಾರ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿದೆ. ಇದರಿಂದ ಸಾಕಷ್ಟು ಗೊಂದಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಜಾತಿ ಆದಾಯ ಪ್ರಮಾಣ ಪತ್ರದಲ್ಲಿ ಇತರ ಹಿಂದುಳಿದ ವರ್ಗ 3 ಬಿ ಎಂದು ನಮೂದಿಸಿರುವ ಕಾರಣ ಕೇಂದ್ರ ಸರ್ಕಾರದ ಅಡಿ ಬರುವ ನವೋದಯ ವಿದ್ಯಾಲಯಗಳಿಗೆ ದಾಖಲು ಮಾಡಲು ರಾಜ್ಯ ಸರ್ಕಾರ ನೀಡಿರುವ ಜಾತಿ ಪ್ರಮಾಣ ಪತ್ರ ಮಾನ್ಯವಾಗುವುದಿಲ್ಲ. ಆದ್ದರಿಂದ ಸಮುದಾಯಕ್ಕೆ ಸೇರಿದ ರಾಜ್ಯದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜೀವನ ಅತಂತ್ರವಾಗಿದೆ ಎಂದು ಅಳಲು ತೋಡಿಕೊಂಡರು.

ಕಳೆದ ಬಾರಿಯೂ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್‌ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ರಾಜ್ಯದಿಂದ ಆಯ್ಕೆಯಾದ ಸಮುದಾಯದ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದ ಅಡಿ ದಾಖಲಾತಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಮತ್ತೆ ಅದೇ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೂಡಲೇ ರಾಜ್ಯ ಸರ್ಕಾಋ ಕೇಂದ್ರದ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೊಡಗಲವಾಡಿ, ಜಿಲ್ಲಾಧ್ಯಕ್ಷ ಬಿ.ಆರ್. ವಸಂತಕುಮಾರ್, ಜಿಲ್ಲಾ ಸಂಚಾಲಕ ಧರ್ಮ, ಕೆಂಪರಾಜು, ಚೇತನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.