ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಹೋಬಳಿಯಲ್ಲಿ ವಸತಿ ಶಾಲೆ: ಶಾಸಕ

ಚೌರಗಲ್ಲು ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ
Last Updated 23 ಜನವರಿ 2021, 1:33 IST
ಅಕ್ಷರ ಗಾತ್ರ

ಅರಕಲಗೂಡು: ‘ತಾಲ್ಲೂಕಿನ ಐದು ಹೋಬಳಿಗಳಲ್ಲೂ ವಸತಿ ಶಾಲೆಗಳನ್ನು ತೆರೆಯಲು ಕಾಮಗಾರಿ ಆರಂಭಗೊಂಡಿದ್ದು ಶೈಕ್ಷಣಿಕವಾಗಿ ಇದೊಂದು ಮಹತ್ವದ ಸಾಧನೆ’ ಎಂದು ಶಾಸಕ ಎ. ಟಿ.ರಾಮಸ್ವಾಮಿ ತಿಳಿಸಿದರು.

ಮಲ್ಲಿಪಟ್ಟಣ ಹೋಬಳಿ ಚೌರಗಲ್ಲು ಗ್ರಾಮದಲ್ಲಿ ₹ 24 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘5 ಹೋಬಳಿಗಳ ವಸತಿ ಶಾಲೆ ನಿರ್ಮಾಣಕ್ಕೆ ₹ 120 ಕೋಟಿ ಅನುದಾನ ಮಂಜೂರಾಗಿದೆ. ಸರ್ಕಾರದ ಬದಲಾವಣೆ, ಕೋವಿಡ್ ಸಂಕಷ್ಟಗಳಿಂದಾಗಿ ಆಳುವ ಪಕ್ಷದ ಸದಸ್ಯರ ಕ್ಷೇತ್ರದ ಅಭಿವೃದ್ದಿಗೆ ಅನುದಾನ ದೊರೆಯುತ್ತಿಲ್ಲ ಎಂದು ಆಳಲು ತೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಅನುದಾನ ತಂದು ಕಾಮಗಾರಿ ಕೈಗೊಳ್ಳಲಾಗಿದೆ. ಈ ವಸತಿ ಶಾಲೆಯನ್ನು ಹಿಂದೆ ಕೋಠಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿ ಭೂಮಿ ಪೂಜೆ ನಡೆಸಲಾಗಿತ್ತು. ಜಾಗದ ಮತ್ತು ಸವಲತ್ತುಗಳ ಕೊರತೆ ಕಾರಣ ಇದನ್ನು ಬದಲಿಸಿ ಚೌರಗಲ್ಲು ಗ್ರಾಮದ ಬಳಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವುದಾಗಿ’ ಹೇಳಿದರು.

‘ಶಾಲೆಗಳನ್ನು ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಿದರಷ್ಟೇ ಸಾಲದು, ಮಾದರಿ ಶಾಲೆಗಳಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಅಗತ್ಯ. ಈ ಹಿನ್ನೆಲೆಯಲ್ಲಿ ಎಲ್ಲ 5 ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಲ್ಲಿಪಟ್ಟಣ ಹೋಬಳಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ₹ 6.43 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳು ಹಾಗೂ ₹ 20 ಕೋಟಿ ವೆಚ್ಚದಲ್ಲಿ ಕೊಣನೂರು ಮಲ್ಲಿಪಟ್ಟಣ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘₹ 190 ಕೋಟಿ ವೆಚ್ಚದಲ್ಲಿ 200 ಕೆರೆ ಕಟ್ಟೆಗಳಿಗೆ ನೀರು ಹರಿಸುವ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯಲ್ಲಿ ₹ 50 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದೆ. ಈ ವರ್ಷದ ಏಪ್ರಿಲ್ ವೇಳೆಗೆ ನೀರು ಹರಿಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಸಂಕಷ್ಟದಿಂದಾಗಿ ಕಾರ್ಮಿಕರು ಊರಿಗೆ ತೆರಳಿದ ಕಾರಣ ಇದು ಸಾಧ್ಯವಾಗಿಲ್ಲ’ ಎಂದರು.

ಜಿ.ಪಂ ಸದಸ್ಯ ಎಸ್.ಪಿ.ರೇವಣ್ಣ, ತಾ.ಪಂ ಅಧ್ಯಕ್ಷೆ ಪದ್ಮಾ ಮಹೇಶ್, ಉಪಾಧ್ಯಕ್ಷ ಎಸ್.ಆರ್.ನಾಗರಾಜ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರಾಜ್ ಮಾತನಾಡಿದರು.

ತಾ.ಪಂ ಸದಸ್ಯೆ ಮೀನಾ ಸಿದ್ದಯ್ಯ, ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಇಒ ಎನ್.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಚ್.ನಿಂಗರಾಜ್, ಸಹಾಯಕ ಕೃಷಿ ನಿರ್ದೇಶಕ ರಮೇಶ್‌ಕುಮಾರ್, ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್, ಪ್ರಾಂಶುಪಾಲರಾದ ಎಸ್.ಎಚ್. ಶ್ರುತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT