ಶನಿವಾರ, ಮೇ 15, 2021
24 °C
ಮುಂದುವರಿದ ನೌಕರರ ಮುಷ್ಕರ, 11 ಬಸ್‌ಗಳ ಸಂಚಾರ ಆರಂಭ

ಹಾಸನ: ಮೂರು ದಿನದಲ್ಲಿ ₹ 1.50 ಕೋಟಿ ಆದಾಯ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಕೆಎಸ್‌ಆರ್‌ಟಿಸಿ ಹಾಸನ ವಿಭಾಗಕ್ಕೆ ಮೂರು ದಿನದಲ್ಲಿ ₹1.50 ಕೋಟಿ ಆದಾಯ ನಷ್ಟವಾಗಿದೆ.

ಹಾಸನ ವಿಭಾಗದಲ್ಲಿ 1500 ಚಾಲಕ, ನಿರ್ವಾಹಕರು ಹಾಗೂ ಒಂದು ಸಾವಿರ ಮೆಕಾನಿಕ್‌ಗಳಿದ್ದಾರೆ. ಲಾಕ್‌ಡೌನ್‌ ನಿರ್ಬಂಧ ತೆರವುಗೊಂಡ ಬಳಿಕ ದಿನಕ್ಕೆ ₹55 ರಿಂದ 60 ಲಕ್ಷಕ್ಕೆ ಏರಿಕೆಯಾಗಿತ್ತು. ಲಾಕ್‌ಡೌನ್‌ಗೂ ಮೊದಲು ದಿನದ ಆದಾಯ ₹1 ಕೋಟಿ ಇತ್ತು.

ಮುಷ್ಕರದ ಮೂರನೇ ದಿನವಾದ ಶುಕ್ರವಾರ ಹಾಸನ ವಿಭಾಗದಲ್ಲಿ 11 ಬಸ್‌ಗಳ ಸಂಚಾರ ಆರಂಭಗೊಂಡಿತು.
ಚನ್ನರಾಯಪಟ್ಣಣ 4, ಹಳೇಬೀಡು 3, ಅರಕಲಗೂಡು, ಸಕಲೇಶಪುರ, ಬೇಲೂರು, ಹೊಳನರಸೀಪುರಕ್ಕೆ ತಲಾ ಒಂದು ಬಸ್‌ಗಳು ಸಂಚರಿಸಿದವು. ಟ್ರೈನಿ ಮೆಕಾನಿಕ್‌ಗಳ ಜತೆಗೆ 25 ಚಾಲಕ-ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು.

ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡಿ ಪ್ರಯಾಣಿಕರ ಸುಲಿಗೆ ಮಾಡುತ್ತಿವೆ. ಮೈಸೂರು, ಬೆಂಗಳೂರು, ಅರಸಿಕೆರೆ, ಸಕಲೇಶಪುರ, ಬೇಲೂರು, ಚನ್ನರಾಯಪಟ್ಟಣ ತಾಲ್ಲೂಕು ಕೇಂದ್ರಗಳಿಗೆ ತೆರಳಲು ನಿಗದಿಗಿಂತ ಹೆಚ್ಚು ಹಣ ತೆರುವಂತಾಗಿದೆ.

ಪ್ರಯಾಣಿಕರಿಂದ ಹೆಚ್ಚು ದರ ಪಡೆಯದಂತೆ ಸಾರಿಗೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ವಾಹನಗಳ ಚಾಲಕರಿಗೆ ಸೂಚನೆ ನೀಡಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡಿರುವ ಬಸ್ ಚಾಲಕ, ನಿರ್ವಾಹಕ ಪ್ರದೀಪ್‌ ವಿರುದ್ಧ ಚನ್ನರಾಯಪಟ್ಟಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಸಿಲಾಗಿದೆ. ನೌಕರರ ಮುಷ್ಕರಕ್ಕೆ ಪ್ರದೀಪ್‌ ಪ್ರಚೋದನೆ ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಡಿಪೋ ಅಧಿಕಾರಿಗಳು ಗುರುವಾರ ದೂರು ನೀಡಿದ್ದಾರೆ.

‘ಕರ್ತವ್ಯಕ್ಕೆ ಹಾಜರಾಗುವಂತೆ ಮನೆಗ ಮನೆಗೆ ತೆರಳಿ ನೋಟಿಸ್‌ ನೀಡಲಾಗಿದೆ. ಆದರೆ ನೌಕರರು ಮನ್ನಣೆ ನೀಡುತ್ತಿಲ್ಲ. ದೂರವಾಣಿ ಮೂಲಕ ಮನವೊಲಿಸಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ ಬಹುತೇಕ ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ. ಪತ್ರಿಕಾ ಪ್ರಕಟಣೆ ಮೂಲಕ ಕರ್ತವ್ಯಕ್ಕೆ ಹಾಜರಾಗುವಂತೆ ಎಚ್ಚರಿಕೆ ನೀಡಲಾಗಿದೆ’  ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.