ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಬಿದ್ದ ರಸ್ತೆ, ಕಿತ್ತು ಬಂದ ಡಾಂಬರು

ಎಂಟನೇ ವಾರ್ಡ್‌: ಎವಿಕೆ ಕಾಲೇಜು ರಸ್ತೆ ವಿಸ್ತರಣೆ, ಟ್ಯಾಕ್ಸಿ ನಿಲ್ದಾಣ ನಿರ್ಮಾಣ
Last Updated 12 ಆಗಸ್ಟ್ 2018, 17:13 IST
ಅಕ್ಷರ ಗಾತ್ರ

ಹಾಸನ: ಎಲ್ಲೆಂದರಲ್ಲಿ ಕಸದ ರಾಶಿ, ರಸ್ತೆ ತುಂಬ ಗುಂಡಿ, ಕಸ ನಿರ್ವಹಣೆ ಸಮಸ್ಯೆ, ಶುದ್ಧ ಕುಡಿಯುವ ನೀರಿಗೂ ಪರದಾಟ..

ಇದು ನಗರದ ಹೃದಯಭಾಗದ 8ನೇ ವಾರ್ಡ್‌ನ ಸ್ಥಿತಿ.ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಅವರ ಸೊಸೆ ನೇತ್ರಾವತಿ ಗಿರೀಶ್‌ ಹಾಲಿ ಈ ವಾರ್ಡ್‌ನ ಸದಸ್ಯೆ.

ಹೇಮಾವತಿ ಪ್ರತಿಮೆ ರಸ್ತೆ, ಸಾಲಗಾಮೆ ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ಆರ್.ಸಿ. ರಸ್ತೆ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಮಹಾರಾಜ ಉದ್ಯಾನ ಹೊಂದಿದೆ.

ರಕ್ಷಣಾಪುರಂ 1ನೇ ವೃತ್ತ, ಅರಳೀಕಟ್ಟೆ, ಮಹಾರಾಜ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ ಬಿದ್ದು, ಸವಾರರು ಪ್ರಯಾಸ ಪಡುತ್ತಿದ್ದಾರೆ. ಮಹಾಮಸ್ತಕಾಭಿಷೇಕ ವೇಳೆ ಹಾಕಿದ್ದ ಡಾಂಬರು ಸಹ ಕಿತ್ತು ಬಂದಿದೆ.

ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಪ್ರವಾಸಿ ಮಂದಿರ ಹಿಂಭಾಗದ ರಸ್ತೆಯ ಎರಡು ಬದಿಯಲ್ಲಿ ತ್ಯಾಜ್ಯ ಹಾಕಲಾಗಿದೆ. ಮಹಾರಾಜ ಉದ್ಯಾನದ ಮುಖ್ಯ ರಸ್ತೆ ಡಾಂಬಾರು ಕಿತ್ತು ಬಂದಿದೆ.

ಸುಜಲಾ ಕಾಲೇಜು ಹಿಂಭಾಗದ ಕಾಂಕ್ರಿಟ್‌ ರಸ್ತೆಯೂ ಗುಂಡಿ ಬಿದ್ದಿದೆ. ಮಿಷನ್ ಆಸ್ಪತ್ರೆ ಮುಂಭಾಗ ಫುಟ್ ಪಾತ್‌ನಲ್ಲಿಯೇ ಪಾನಿಪುರಿ ವ್ಯಾಪಾರ ಮಾಡಲಾಗುತ್ತಿದೆ.

ಎ.ವಿ.ಕೆ ಕಾಲೇಜು ರಸ್ತೆ ವಿಸ್ತರಿಸಿ, ಟ್ಯಾಕ್ಸಿ ನಿಲ್ದಾಣ ನಿರ್ಮಿಸಲಾಗಿದೆ. ಮಹಾರಾಜ ಪಾರ್ಕ್‌ನಲ್ಲಿ ಮಕ್ಕಳ ಕ್ರೀಡಾ ಸಾಮಗ್ರಿಗಳು ಉತ್ತಮವಾಗಿವೆ.

ಹೇಮಾವತಿ ಪ್ರತಿಮೆಯಿಂದ ಹರ್ಷ ಮಹಲ್‌ ರಸ್ತೆವರೆಗೆ ವಿಸ್ತರಣೆ ಮಾಡಿರುವುದರಿಂದ ವಾಹನ ದಟ್ಟಣೆ ತಪ್ಪಿದೆ. ಚರಂಡಿಗಳಿಗೆ ಸ್ಲ್ಯಾಬ್ ಹಾಕುವ ಕಾಮಗಾರಿ ಶೇಕಡಾ 30 ರಷ್ಟು ಮುಗಿದಿದೆ.

5 ಕೊಳವೆ ಬಾವಿ ಕೊರೆಸಲಾಗಿದ್ದು, ನೀರಿನ ಸಮಸ್ಯೆ ವೇಳೆ   ಸದಸ್ಯೆ ಸ್ವಂತ ಹಣದಿಂದಲೇ ಹಲವು ಬಾರಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದಾರೆ.

‘ಸದಸ್ಯೆ ನೇತ್ರಾವತಿ ಹೆಚ್ಚು ಬೆಂಗಳೂರಿನಲ್ಲಿ ಇರುತ್ತಾರೆ. ಹಾಗಾಗಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ’ ಎಂಬುದು ನಿವಾಸಿಗಳ ಆರೋಪ.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ, ‘ಪ್ರತಿ ವರ್ಷ ನಿವಾಸಿಗಳ ಮನೆಗೆ ತೆರಳಿ ಡೈರಿ ಹಾಗೂ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ ನೀಡಿದ್ದೇವೆ. ಬೆಂಗಳೂರಿನಲ್ಲಿ ಇದ್ದಾಗ ಪತಿ ಹಾಗೂ ಮಾವ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ’ ಎಂದು ಸ್ಪಷ್ಟನೆ ನೀಡಿದರು.

ವಾರ್ಡ್ ಡೈರಿ;
ವ್ಯಾಪ್ತಿ: ಪೂರ್ವಕ್ಕೆ ಆರ್.ಸಿ.ರಸ್ತೆ, ಗಂಧದ ಕೋಠಿ ಹಿಂಭಾಗದ ರಸ್ತೆ, ರಕ್ಷಣಾಪುರಂ 2ನೇ ಕ್ರಾಸ್ ಡಾ. ಪ್ರಕಾಶ್‌ ಮನೆವರೆಗೆ. ಪಶ್ಚಿಮಕ್ಕೆ ಎನ್.ಆರ್.ವೃತ್ತದಿಂದ ಹೇಮಾವತಿ ಪ್ರತಿಮೆವರೆಗೆ ಮತ್ತು ಮಹಾವೀರ ವೃತ್ತದಿಂದ ಅರಳಿಕಟ್ಟೆ ವೃತ್ತದವರೆಗೆ, ಸಾಲಗಾಮೆ ರಸ್ತೆ. ಉತ್ತರಕ್ಕೆ ಅರಳಿಕಟ್ಟೆ ರಸ್ತೆಯಿಂದ ಆರ್.ಸಿ. ರಸ್ತೆವರೆಗೆ, ಮುಂದುವರೆದು ಪೂರ್ವಾಭಿಮುಖವಾಗಿ ಎಲ್.ಸಿ.ಸಿ. ಕಂಪ್ಯೂಟರ್‌ ರಸ್ತೆಯಿಂದ ಡಾ. ಪ್ರಕಾಶ್ ಮನೆವರೆಗೆ. ದಕ್ಷಿಣ ಬಿ.ಎಂ. ರಸ್ತೆಯಿಂದ ಸರ್ಕಾರಿ ಹೈಸ್ಕೂಲ್ ವರೆಗೆ.

ಪ್ರಮುಖ ಸ್ಥಳ: ಮಹಾರಾಜ ಉದ್ಯಾನ, ಹೇಮಾವತಿ ಪ್ರತಿಮೆ ವೃತ್ತ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಹಿಮ್ಸ್‌ ಆಸ್ಪತ್ರೆ, ಮಿಷನ್ ಆಸ್ಪತ್ರೆ, ಸಂಸ್ಕೃತ ಭವನ, ಸೀತಾರಾಮಾಂಜನೇಯ ದೇವಸ್ಥಾನ, ಅಂಬೇಡ್ಕರ್‌ ಭವನ, ಎಸ್ ಬಿಜಿ ಚಿತ್ರಮಂದಿರ, ಗಂಧದ ಕೋಠಿ, ಸಂಸದರ ಭವನ, ಪ್ರವಾಸೋದ್ಯಮ ಇಲಾಖೆ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಸರ್ಕಾರಿ ಬಾಲ ಮಂದಿರ.

ನಗರಸಭೆ ಸದಸ್ಯರು; ನೇತ್ರಾವತಿ ಗಿರೀಶ್ (ಜೆಡಿಎಸ್)
ಮತದಾರರು; 2500

ನೀರಿನ ಸಮಸ್ಯೆ ಇಲ್ಲ

ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಕಸ ನಿರ್ವಹಣೆ ಉತ್ತಮವಾಗಿ ಆಗುತ್ತಿದೆ. ದಾರಿಯಲ್ಲಿ ಹೋಗುವವರು ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಎವಿಕೆ ಕಾಲೇಜು ರಸ್ತೆ ವಿಸ್ತರಣೆ ಮಾಡಲಾಗಿದೆ. ತೆರೆದ ಚರಂಡಿಗಳಿಗೆ ಸ್ಲ್ಯಾಬ್‌ ಹಾಕುವ ಕೆಲಸ ಮಾಡಲಾಗುತ್ತಿದೆ
- ನೇತ್ರಾವತಿ ಗಿರೀಶ್, ನಗರಸಭೆ ಸದಸ್ಯೆ (ಜೆಡಿಎಸ್)

ತಪ್ಪಿದ ಸೊಳ್ಳೆಕಾಟ

ಸಿಎಸ್ಐ ಕಾಂಪೌಂಡ್ ಒಳಗೆ ಎಲ್ಲರೂ ಕಸ ಎಸೆದು ಹೋಗುತ್ತಿದ್ದರು. ಇದರಿಂದ ಸೊಳ್ಳೆ ಕಾಟ ಹೆಚ್ಚಿತ್ತು. ಈಗ ಸ್ವಚ್ಛ ಮಾಡಿದ್ದು, ತಕ್ಕಮಟ್ಟಿಗೆ ಸರಿಯಾಗಿದೆ
-ಮ್ಯಾಥೊ, ನಿವಾಸಿ.

ಚರಂಡಿಗೆ ಮಣ್ಣು

ಮನೆಯ ಹಿಂಭಾಗ ಚರಂಡಿಯಲ್ಲಿ ಮಣ್ಣು ಕಟ್ಟಿಕೊಂಡು ಹಲವು ದಿನ ಕಳೆದಿದೆ. ಸದಸ್ಯರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಶೌಚಾಲಯದ ನೀರು ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಸುತ್ತಲ ನಿವಾಸಿಗಳು ವಾಸಿಸಲು ಆಗುತ್ತಿಲ್ಲ
- ಮಂಗಳ, ಗೃಹಿಣಿ

ಗುಂಡಿ ಬಿದ್ದ ರಸ್ತೆಗಳು

ಅನೇಕ ಕಡೆ ರಸ್ತೆಗಳು ಗುಂಡಿ ಬಿದ್ದಿವೆ. ಈ ಬಗ್ಗೆ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳಿಯರೇ ಅನೇಕ ಬಾರಿ ಗುಂಡಿಗೆ ಮಣ್ಣು ಮುಚ್ಚಿದ್ದಾರೆ. ಮುಂದೆ ಯಾರೇ ಗೆದ್ದರೂ ರಸ್ತೆ ದುರಸ್ತಿಗೆ ಆದ್ಯತೆ ನೀಡಲಿ
- ಚಂದ್ರಶೇಖರ್, ಕ್ಯಾಂಟೀನ್ ಮಾಲೀಕ

ರೋಗದ ಭೀತಿ

ಅನೇಕ ಕಡೆ ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಹಾಕದ ಕಾರಣ ರೋಗದ ಭೀತಿ ಇದೆ. ಸೀತಾರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ಮ್ಯಾಕ್ಸಿ ಕ್ಯಾಬ್ ನಿಲ್ದಾಣವಿದ್ದು, ಸಂಚಾರ ತೊಂದರೆ ಆಗುತ್ತಿದೆ. ಕೆಲ ಕಿಡಿಗೇಡಿಗಳಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ
-ವಿದ್ಯಾ, ಗೃಹಿಣಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT