3
ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಿಸಿ ರೋಹಿಂಣಿ ಸಿಂಧೂರಿ ಎಚ್ಚರಿಕೆ

‘ಕಾಲ ಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಿ’

Published:
Updated:
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳ ಸಭೆ ನಡೆಸಿದರು

ಹಾಸನ: ‘ಮುಂದಿನ ಒಂದೆರಡು ದಿನಗಳೊಳಗಾಗಿ ಬಾಕಿ ಇರುವ ವಿವಾದಗಳಿಲ್ಲದ ಎಲ್ಲ  ಮ್ಯುಟೇಷನ್‌ ಪೂರ್ಣಗೊಳಿಸಿ’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಅರ್ಜಿ, ಪ್ರಕರಣಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಸಹಿಸಲಾಗದು. ಭೂಮಿ, ಸಕಾಲ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳು ಕಾಲಮಿತಿಯೊಳಗೆ ವಿಲೇವಾರಿಯಾಗಬೇಕು. ತಕರಾರು ಇರದ ಪ್ರಕರಣಗಳನ್ನು ನಿಯಮಿತವಾಗಿ ಮುಕ್ತಾಯಗೊಳ್ಳಬೇಕು. ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಕೆಲಸ ಚುರುಕುಗೊಳಿಸಬೇಕು, ನಿರ್ಲಕ್ಷ್ಯಿಸಿದರೆ ಶಿಸ್ತುಕ್ರಮಕೈಗೊಳ್ಳುತ್ತೇವೆ’ ಎಂದರು.

‘ಬಾಕಿ ಇರುವ ಪೋಡು ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಬೇಕು. ಮ್ಯುಟೇಷನ್‌ ಅರ್ಜಿಗಳ ಇತ್ಯರ್ಥ ಜಿಲ್ಲೆಯಲ್ಲಿ ಇತರೆಡೆಗಳಿಗಿಂತ ಬೇಗನೆ ಆಗಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿ ಗಮನಹರಿಸಬೇಕು. ಭೂ ನೋಂದಣಿ, ರಾಜಸ್ವ ಸ್ವೀಕಾರದ ವ್ಯತ್ಯಾಸ ಸೇರಿ ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. 3 ತಿಂಗಳೊಳಗೆ 3 ವರ್ಷಗಳಿಗೆ ಮೇಲ್ಪಟ್ಟ ಪ್ರಕರಣ ಇತ್ಯರ್ಥಪಡಿಸಬೇಕು’ ಎಮದು ತಾಕೀತು ಮಾಡಿದರು.

ಬೆಳೆ ಪರಿಹಾರ: ಮಳೆಯಿಂದ ಬೆಳೆ, ಮನೆಗಳಿಗೆ ಹಾನಿ ಸಂಭವಿಸಿರುವ ಕಡೆ ಶೀಘ್ರ ಪರಿಹಾರ ನೀಡಬೇಕು. ಆಲೂಗೆಡ್ಡೆ ಬೆಳೆ ನಷ್ಟಕ್ಕೆ ಸಂಬಂಧಿಸಿ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ ಪರಿಹಾರ ಹಾಗೂ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅರ್ಹ ಪಿಂಚಣಿದಾರರ ಪರಿಶೀಲನೆಯಾಗಬೇಕು. ಮರಣ ಹೊಂದಿದವರ ಮಾಹಿತಿ ಸಂಗ್ರಹಿಸಿ ಮತದಾರರ ಪಟ್ಟಿ, ಪಡಿತರ ಪಟ್ಟಿ, ಹಾಗೂ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಬೇಕಿದೆ. ಈ ಬಗ್ಗೆ ಎಲ್ಲಾ ಕಂದಾಯ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಜಿಲ್ಲೆಯಲ್ಲಿ ಬಾಕಿ ಇರುವ ಹೇಮಾವತಿ ಯೋಜನಾ ನಿರಾಶ್ರಿತರ ಪುನರ್ ವಸತಿ ಪ್ರಕರಣಗಳು ತ್ವರಿತವಾಗಿ ಮುಗಿಯಬೇಕು. ಎರಡು ತಿಂಗಳಲ್ಲಿ ಇತ್ಯರ್ಥಪಡಿಸುವ ಅಗತ್ಯವಿದೆ. ಸರ್ವೆಯರ್‌ಗಳ ನಿಯೋಜನೆಗೆ  ಪೂರಕವಾಗಿ ವಿಶೇಷ ಭೂ ಸ್ವಾಧೀನಧಿಕಾರಿ, ಭೂ ದಾಖಲೆಗಳ ಉಪ ನಿರ್ದೇಶಕರು ಜಂಟಿ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 2800 ಎಕರೆ ಒತ್ತುವರಿ ತೆರವು ಬಾಕಿ ಇದೆ. ಬಗರ್ ಹುಕುಂ ಅನ್ವಯ ವಿಲೇವಾರಿಯಾಗಿರುವ ಅರ್ಜಿ, ಭೂ ಪ್ರಮಾಣ ಪರಿಶೀಲಿಸಿ ವಾಸ್ತವ ವರದಿ ಸಿದ್ಧಪಡಿಸಿ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್, ವಿಶೇಷ ಭೂಸ್ವಾಧೀನಾಧಿಕಾರಿ ಜಗದೀಶ್, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಕೃಷ್ಣಪ್ರಸಾದ್, ವಿವಿಧ ತಹಶೀಲ್ದಾರ್‌ಗಳು, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !