ಗುರುವಾರ , ಆಗಸ್ಟ್ 11, 2022
21 °C
ಒಂಬತ್ತು ಲಾಂಗ್‌, ಎರಡು ಕಾರು, ಬೈಕ್‌ ವಶ

ರೌಡಿ ಶೀಟರ್ ಕೊಲೆ : 12 ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ಹಿರೀಸಾವೆ ಪೋಲಿಸ್ ಠಾಣೆ ವ್ಯಾಪ್ತಿಯ ಕಮ್ಮರವಳ್ಳಿಯ ರೌಡಿ ಶೀಟರ್ ಲಿಂಗರಾಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ.

ರಾಮನಗರದ ರಾಯರ ದೊಡ್ಡಿಯ ಮೋಹನ, ಬೆಂಗಳೂರಿನ ಮುನೇಶ್ವರ ಬಡಾವಣೆಯ ನಂಜಪ್ಪ, ತಿಲಕ್ ನಗರದ ಗ್ರೇಸ್ ವಾಲ್ಟರ್,  ಆಡುಗೋಡಿಯ ನವೀನ್ ಕುಮಾರ,  ಅಯ್ಯಪ್ಪ ಬಡಾವಣೆಯ ಪ್ರದೀಪ,  ಲಾಲ್ ಬಾಗ್ ಸಿದ್ದಾಪುರದ ಸುನೀಲ್ ಕುಮಾರ, ಬನಶಂಕರಿ 3ನೇ ಹಂತದ ರಮೇಶ, ವಿನಾಯಕನಗರದ ಪಾರ್ಥಿಬನ್,  ಜೆ.ಪಿ. ನಗರದ ಕಣ್ಣನ್, ಆಡುಗೋಡಿಯ ಸುರೇಶ, ಬನಶಂಕರಿ 2ನೇ ಹಂತದ ಮನೋಹರ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಕಮ್ಮರವಳ್ಳಿ ಗ್ರಾಮದ ಸುದೀಪನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ 9 ಲಾಂಗ್ ಗಳು, ಒಂದು ಸುತ್ತಿಗೆ, ಎರಡು ಕಾರುಗಳು, ಒಂದು ಮೋಟರ್ ಬೈಕ್, ಎರಡು ಹೆಲ್ಮೆಟ್  ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬಂಧಿತರ ಪೈಕಿ ಎಂಟು ಆರೋಪಿಗಳು ವಿವಿಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ವೈಯಕ್ತಿಕ ದ್ವೇಷ ಹಾಗೂ ಬೆಂಗಳೂರು ನಗರದಲ್ಲಿ ರೌಡಿಸಂ ಹವಾ ಸೃಷ್ಟಿಸಲು ಮೃತ ಲಿಂಗರಾಜ ಮತ್ತು ಆರೋಪಿ ಮೋಹನ ಗುಂಪಿನ ನಡುವೆ ಪೈಪೋಟಿ ನಡೆದಿತ್ತು. ಲಿಂಗರಾಜನನ್ನು ಸಾಯಿಸಿದರೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಮೇಲುಗೈ ಸಾಧಿಸಬಹುದು ಅಂದುಕೊಂಡು ಮೋಹನ ಮತ್ತವರ ತಂಡ ಸ್ಥಳೀಯರ ನೆರವು ಪಡೆದು ಡಿ.8ರ ರಾತ್ರಿ ಕಮ್ಮರವಳ್ಳಿಯಲ್ಲಿ ಲಿಂಗರಾಜನನ್ನು ಕೊಲೆ ಮಾಡಿದೆ ಎಂದು ವಿವರಿಸಿದರು.

ರೌಡಿಶೀಟರ್‌ ಲಿಂಗರಾಜ ಬೆಂಗಳೂರಿನ ಶಾಂತಿನಗರದಲ್ಲಿ‌ ನೆಲೆಸಿ  ರಿಯಲ್ ಎಸ್ಟೇಟ್ ವ್ಯವಹಾರ‌ ನಡೆಸುತ್ತಿದ್ದ.  ರೌಡಿ ಚಟುವಟಿಕೆ ನಡೆಸಿ, ಕೊಲೆ ಪ್ರಕರಣದಲ್ಲಿ ‌ಭಾಗಿಯಾಗಿದ್ದ. ಲಾಕ್‌ಡೌನ್  ಸಂದರ್ಭದಲ್ಲಿ ಕಮ್ಮರವಳ್ಳಿ ಗ್ರಾಮಕ್ಕೆ ಹಿಂದಿರುಗಿದ್ದ. ಕೊಲೆ ಸಾಕ್ಷ್ಯ ನಾಶಪಡಿಸಲು ಲಿಂಗರಾಜನ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಆರೋಪಿಗಳು ತೆಗೆದುಕೊಂಡು ಹೋಗಿದ್ದರು ಎಂದರು.

ಸರ್ಕಲ್ ಇನ್ ಸ್ಪೆಕ್ಟರ್ ಬಿ.ಜಿ. ಕುಮಾರ್, ಹಿರೀಸಾವೆ ಠಾಣೆಯ ಪಿಎಸ್ ಐ ಎಂ. ಶ್ರೀನಿವಾಸ್, ನುಗ್ಗೇಹಳ್ಳಿಯ ಠಾಣೆಯ ಪಿಎಸ್‍ಐ ಧನರಾಜ್, ಸಿಬ್ಬಂದಿಗಳಾದ ಕುಮಾರಸ್ವಾಮಿ, ಜವರೇಗೌಡ, ಮಹೇಶ, ಜಯಪ್ರಕಾಶ್, ಪ್ರಕಾಶ್, ಲೋಕೇಶ್, ಹರೀಶ್, ಪ್ರವೀಣ್ ಕುಮಾರ, ಷಫಿ ಉರ್ ರೆಹಮಾನ್, ಚಂದ್ರೇಶ್, ಧರಣೇಶ್, ಸತೀಶ, ಲೋಕೇಶಾಚಾರಿ, ಸುಭಾಷ್ ಚಂದ್ರ, ಯೋಗೇಶ್, ರಾಮಕೃಷ್ಣ, ವೀರಭದ್ರೇಗೌಡ, ಮಂಜುನಾಥ್, ನೇತ್ರೇಶ್, ಪರಮೇಶ್‌ ಅವರ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದರು.

ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.