ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ನಾಗರಾಜು, ಮಂಜುನಾಥ್‌ಗೆ ಪ್ರಶಸ್ತಿ

ರುದ್ರಪಟ್ಟಣದ ಸಂಗೀತೋತ್ಸವದಲ್ಲಿ ಗೌರವ; ಚಿನ್ನದ ಕಡಗ ತೊಡಿಸಿದ ನಿರ್ಮಲಾನಂದನಾಥ ಸ್ವಾಮೀಜಿ
Last Updated 20 ಮೇ 2019, 20:10 IST
ಅಕ್ಷರ ಗಾತ್ರ

ಕೊಣನೂರು: ರಾಮನಾಥಪುರ ಹೋಬಳಿಯ ರುದ್ರಪಟ್ಟಣದಲ್ಲಿ ಭಾನುವಾರ ನಡೆದ ಸಂಗೀತೋತ್ಸವದಲ್ಲಿ ವಿದ್ವಾನ್‌ಗಳಾದ ಮೈಸೂರು ಎಂ.ನಾಗರಾಜು ಮತ್ತು ಡಾ.ಎಂ.ಮಂಜುನಾಥ್‌ ಅವರಿಗೆ 2019ನೇ ಸಾಲಿನ ‘ನಾಚಾರಮ್ಮ ಪ್ರಶಸ್ತಿ’ ಮತ್ತು ‘ಗಾನಕಲಾ ಸ್ಪರ್ಶಮಣಿ’ ಬಿರುದು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಮೈಸೂರು ಎಂ.ಮಂಜುನಾಥ್ ಮಾತನಾಡಿ, ‘ಸಾಧನೆ ಮಾಡಿದವರು ತಮ್ಮ ಊರನ್ನು ಮರೆತು ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ಆದರೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಆರ್.ಕೆ. ಪದ್ಮನಾಭ ಅವರು ತಮ್ಮ ಹುಟ್ಟೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ’ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ, ‘ರುದ್ರ ಪಟ್ಟಣದಲ್ಲಿ ಆರ್.ಕೆ. ಪದ್ಮನಾಭ ಅವರ ನೇತೃತ್ವದಲ್ಲಿ ನಿರ್ಮಾಣ ವಾಗಿರುವ ದ್ವಾದಶ ಸ್ವರಸ್ತಂಭ ಮಂಟಪವು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಅಪರೂಪದ ಕೊಡುಗೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಆದಿ ಚುಂಚನಗಿರಿ ಮಠದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ‘ಅನಾದಿ ಕಾಲದಿಂದಲೂ ಸರಸ್ವತಿಯನ್ನು ಪೂಜಿಸುವ ಸಂಸ್ಕೃತಿ ಯನ್ನುಮೈಗೂಡಿಸಿಕೊಂಡು ಬಂದಿರುವ ಭಾರತವು ಪ್ರಪಂಚದ ಜ್ಞಾನದೇಗುಲ ಎಂದೆನಿಸಿದೆ. ಮಾಯೆಗೆ ಬೆರಗಾಗದೆ ನಿಷ್ಕಾಮ ಸೇವೆ, ಉಪಾಸನೆ ಮತ್ತು ಜ್ಞಾನದ ಮೂಲಕ ಅಂತರಂಗದಲ್ಲಿರುವ ಕತ್ತಲನ್ನು ಕಳೆದು ವಾಸ್ತವವನ್ನು ಅರ್ಥ ಮಾಡಿಕೊಂಡು ಬದುಕಬೇಕು. ಬೇರನ್ನು ಮರೆತ ಮರ, ಪೂರ್ವಜರನ್ನು ಮರೆತ ವ್ಯಕ್ತಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ. ಪ್ರತಿಯೊಬ್ಬರೂ ತಮ್ಮ ಸಂಸ್ಕೃತಿಯನ್ನು ಅರಿಯದಿದ್ದಲ್ಲಿ ಬದುಕು ಕಷ್ಟಕರವಾಗುತ್ತದೆ’ ಎಂದು ಹೇಳಿದರು.

‘ಸಂಗೀತ ವಿ.ವಿ ಆರಂಭಿಸಲಿ’

ಗ್ರಾಮವು ಸಂಗೀತ ಕ್ಷೇತ್ರಕ್ಕೆ ಅದ್ವಿತೀಯ ಸಾಧಕರನ್ನು ನೀಡಿದೆ. ಇಂತಹ ಗ್ರಾಮದಲ್ಲಿ ಸಂಗೀತ ವಿಶ್ವವಿದ್ಯಾಲಯ ಆರಂಭಿಸಬೇಕು ಎಂದು ವಿದ್ವಾನ್‌ ಆರ್.ಕೆ.ಪದ್ಮನಾಭ ಆಗ್ರಹಿಸಿದರು.

‘18 ವರ್ಷಗಳಿಂದ ಸತತವಾಗಿ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ. ಇಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರಿಂದ ಮತ್ತಷ್ಟು ಸಂಗೀತ ಸಾಧಕರನ್ನು ಹುಟ್ಟುಹಾಕಬಹುದು. ನಾನು ಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ಇದಕ್ಕೆ ಬೆಂಬಲ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ನೂರಾರು ವರ್ಷಗಳ ಸಂಗೀತದ ಪರಂಪರೆಯನ್ನು ಹೊಂದಿರುವ ರುದ್ರಪಟ್ಟಣದಲ್ಲಿ ಸಂಗೀತ ವಿಶ್ವವಿದ್ಯಾನಿಲಯ ಸ್ಥಾಪನೆಯಾದರೆ ಸಾರ್ಥಕವಾಗುತ್ತದೆ’ ಎಂದರು.

ದ್ವಾದಶ ಸ್ವರಸ್ತಂಭ ಉದ್ಘಾಟನೆ

ಇಲ್ಲಿನ ಸಪ್ತಸ್ವರ ಮಂದಿರದ ಆವರಣದಲ್ಲಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ದ್ವಾದಶ ಸ್ವರಸ್ತಂಭವನ್ನು ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಇದಕ್ಕೂ ಮುನ್ನ ರಾಮಮಂದಿರದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು.

ರುದ್ರಪಟ್ಟಣದಿಂದ ಕಾವೇರಿ ನದಿಯ ದಂಡೆಯಲ್ಲಿದ್ದ ಸಮಾರಂಭದ ವೇದಿಕೆಗೆ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪ್ರಶಸ್ತಿ ಪುರಸ್ಕೃತರನ್ನು ಬೆಳ್ಳಿರಥದಲ್ಲಿ ಕೂರಿಸಿ ಜನಪದ ಕಲಾತಂಡಗಳೊಂದಿಗೆಮೆರವಣಿಗೆಯಲ್ಲಿ ಕರೆತರಲಾಯಿತು.

ಕಾವೇರಿ ನದಿ ದಂಡೆಯ ಮಂಟಪದಲ್ಲಿ ಚೆನ್ನಕೇಶ್ವರ ಸ್ವಾಮಿಗೆ ತೆಪ್ಪೋತ್ಸವ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT