ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸೌಕರ್ಯದ ನಿರೀಕ್ಷೆಯಲ್ಲಿ ಗ್ರಾಮೀಣ ಕಾಲೇಜುಗಳು

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಸೌಲಭ್ಯಗಳ ಕೊರತೆ: ಖಾಸಗಿ ಕಾಲೇಜುಗಳತ್ತ ವಿದ್ಯಾರ್ಥಿಗಳು
Last Updated 13 ಜೂನ್ 2022, 3:21 IST
ಅಕ್ಷರ ಗಾತ್ರ

ಹಾಸನ: ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿದ್ದು, ಪಿಯುಸಿ ತರಗತಿಗಳೂ ಶುರುವಾಗಿವೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಗಣನೀಯವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 19,994 ವಿದ್ಯಾರ್ಥಿಗಳ ಪೈಕಿ 19,115 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು. ಪಿಯುಸಿ ಪ್ರವೇಶ ಪಡೆದಿದ್ದಾರೆ.

ಜಿಲ್ಲೆಯಲ್ಲಿ 170 ಪದವಿಪೂರ್ವ ಕಾಲೇಜುಗಳಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಇದೀಗ ತರಗತಿಗಳು ಆರಂಭವಾಗಿದ್ದು, ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಸ್ಥಿತಿಗತಿಯ ಕುರಿತು ಅವಲೋಕನ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಸುಸಜ್ಜಿತ ಕಟ್ಟಡಗಳು, ಮೂಲ ಸೌಕರ್ಯಗಳಿದ್ದರೂ, ಪ್ರಯೋಗಾಲಯ, ನುರಿತ ಬೋಧಕರ ಕೊರತೆ ಇದೆ.

ಅರಸೀಕೆರೆ ನಗರದ ಹೃದಯ ಭಾಗದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದ್ದು, ಔಚಾಲಯದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಪರದಾಡುವಂತಾಗಿದೆ.

ಬಡ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ, ಬಹುತೇಕ ತರಗತಿ ಕೊಠಡಿಗಳು ಶಿಥಿಲವಾಗಿದ್ದು ಚಾವಣಿ ಕುಸಿಯುವ ಸ್ಥಿತಿಯಲ್ಲಿದೆ. ಅದೇ ಕೊಠಡಿ ಯಲ್ಲಿ ವಿಜ್ಞಾನ ತರಗತಿ ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ಶೌಚಾಲಯ ಸಂಪೂರ್ಣ ಮುಚ್ಚಿದೆ, ಸಮರ್ಪಕ ಬಾಗಿಲು ಇಲ್ಲದೆ ಗಿಡ ಗಂಟೆಗಳು ಬೆಳೆದು, ದುರ್ವಾಸನೆ ಬೀರುತ್ತಿದೆ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಪ್ರೌಢಶಾಲೆ ಶೌಚಾಲಯವನ್ನೇ ಬಳಸುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಮರವೊಂದು ಬೀಳುವ ಹಂತದಲ್ಲಿದೆ, ಇದರಿಂದ ವಿದ್ಯಾರ್ಥಿನಿಯರು ಪ್ರಾಣವನ್ನು ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ಇದೆ.

ಆವರಣದೊಳಗೆ ವಿದ್ಯುತ್ ಪರಿವರ್ತಕವಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸೆಸ್ಕಾಂ ಕಣ್ಮುಚ್ಚಿ ಕುಳಿತಿದ್ದು ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಸ್ವಚ್ಛತೆ ಸಂಪೂರ್ಣವಾಗಿ ನೆಲಕಚ್ಚಿದೆ, ಬೋಧನೆ ಮಾಡುವ ಉಪನ್ಯಾಸಕರಿಗೂ ಶೌಚಾಲಯ ಸೌಲಭ್ಯ ಇಲ್ಲದಂತಾಗಿದೆ ಎಂದು ಪಾಲಕರು ದೂರಿದ್ದಾರೆ.

‘ತರಗತಿ ಕೊಠಡಿಗಳು ಶಿಥಿಲ ವಾಗಿದ್ದು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲು ಶಾಸಕರಿಗೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಪ್ರಾಂಶುಪಾಲ ಕೆ.ಆರ್. ರೇಣುಕಾರಾಧ್ಯ ತಿಳಿಸಿದ್ದಾರೆ.

ಹಳೇಬೀಡಿನ ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜು ಗುಣಮಟ್ಟದ ಬೋಧನೆಗೆ ಹೆಸರಾಗಿದೆ. ಕಳೆದ ವರ್ಷ ಗಣಿತ, ಭೌತವಿಜ್ಞಾನ ಉಪನ್ಯಾಸಕರು ವರ್ಗಾವಣೆ ಆಗಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಯಿತು. ಅತಿಥಿ ಉಪನ್ಯಾಸಕರು ನೇಮಕವಾದರೂ ಮಕ್ಕಳಿಗೆ ಪರಿಪೂರ್ಣ ಬೋಧನೆ ದೊರಕಲಿಲ್ಲ. ಎರಡೂ ವಿಷಯಗಳಿಗೆ ಕಾಯಂ ಉಪನ್ಯಾಸಕರ ನೇಮಕ ಆಗಬೇಕು ಎಂಬುದು ಪೋಷಕರ ಬೇಡಿಕೆ.

ಹಳೇಬೀಡಿನಲ್ಲಿ ಎರಡು ಖಾಸಗಿ ಕಾಲೇಜು, ಒಂದು ಸರ್ಕಾರಿ ಕಾಲೇಜು ಇವೆ. ಪಕ್ಕದ ಗ್ರಾಮಗಳಾದ ಸಾಣೇನಹಳ್ಳಿ, ಹಗರೆಯಲ್ಲಿಯೂ ಸರ್ಕಾರಿ ಕಾಲೇಜುಗಳಿವೆ. ಹೀಗಾಗಿ ಪೈಪೋಟಿಯಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಹಿರೀಸಾವೆ ಹೋಬಳಿಯಲ್ಲಿ 3 ಸರ್ಕಾರಿ ಪದವಿಪೂರ್ವ ಕಾಲೇಜು ಗಳಿದ್ದು, ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳಿವೆ. ಶೌಚಾಲಯದ ಸಮಸ್ಯೆ ಹೊರತು ಪಡಿಸಿ, ಉಪನ್ಯಾಸಕರು ಸೇರಿದಂತೆ ಎಲ್ಲ ಸೌಲಭ್ಯಗಳು ಇವೆ. ಆದರೆ ಪ್ರವೇಶ ಪಡೆಯುವವರ ಸಂಖ್ಯೆ ಈ ವರ್ಷ ಶೇ 50 ರಷ್ಟು ಕಡಿಮೆಯಾಗಿದೆ.

‘ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಫಲಿತಾಂಶ ಬಂದಿದ್ದು, ಆದರೆ, ಗ್ರಾಮೀಣ ಕಾಲೇಜಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸತ್ಯಸಾಯಿ ಪ್ರಸಾದ್.

‘ದಿಡಗ ಪಿಯು ಕಾಲೇಜಿಗೆ 2 ಕೊಠಡಿಗಳ ಕೊರತೆ ಇದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಪಿಯೂ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಪೋಷಕರಿಗೆ ಮಾಹಿತಿ ನೀಡುತ್ತೇವೆ, ಕಠಿಣ ನಿಯಮದಿಂದ ಕಾಲೇಜಿಗೆ ಸೇರುತ್ತಿಲ್ಲ’ ಎನ್ನುತ್ತಾರೆ ಪ್ರಾಂಶುಪಾಲ ಮಂಜುನಾಥ್.

ಚನ್ನರಾಯಪಟ್ಟಣದಲ್ಲಿ 3ಸರ್ಕಾರಿ ಪಿಯು ಕಾಲೇಜುಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲಿ ಬಹುತೇಕ ಅಷ್ಟೇ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇಲ್ಲ. ಸುಸಜ್ಜಿತ ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಇದೆ. ಸ್ವಲ್ಪ ಪ್ರಮಾಣದಲ್ಲಿ ಡೆಸ್ಕ್‌ಗಳ ಕೊರತೆ ಇದೆ. ಸ್ವತಂತ್ರ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿಯೂ ಕೊಠಡಿ ಕೊರತೆ ಇಲ್ಲ. ಕಾಲೇಜಿಗೆ ಹೊಂದಿಕೊಂಡಂತೆ ಹೊಸದಾಗಿ 16 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರಯೋಗಾಲಯ ಇದೆ.

ಪೇಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ 6 ಕೊಠಡಿಗಳಿವೆ. ತರಗತಿ ನಡೆಸಲು ಇನ್ನೂ ಮೂರು ಕೊಠಡಿಗಳು ಮತ್ತು ಪ್ರಯೋಗಾಲಯಕ್ಕೆ ಮೂರು ಕೊಠಡಿಗಳ ಅಗತ್ಯವಿದೆ. 50 ಡೆಸ್ಕ್‌ಗಳ ಅವಶ್ಯಕತೆ ಇದೆ. ಮೂರು ಕಾಲೇಜುಗಳಲ್ಲಿ ಕುಡಿಯುವ ನೀರು, ಶೌಚಾಲಯದ ಸವಲತ್ತು ಇದೆ. ಕಾಯಂ ಉಪನ್ಯಾಸಕರ ಜೊತೆಗೆ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಪಿಯು ಕಾಲೇಜುಗಳು ಇರುವುದರಿಂದ ಸರ್ಕಾರಿ ಪಿಯು ಕಾಲೇಜುಗಳ ಪ್ರವೇಶಾತಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ.

ಬೇಲೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 450 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಕೊಠಡಿಗಳ ಅವಶ್ಯಕತೆ ಇದೆ. ಮತ್ತು ಪ್ರಯೋಗಾಲಯವಿದ್ದರೂ ಸಾಕಷ್ಟು ವಸ್ತುಗಳ ಕೊರತೆ ಇದೆ. ರಾತ್ರಿ ವೇಳೆ ಕಾಲೇಜು ಆವರಣದಲ್ಲಿ ಕುಡುಕರ ಕಾಟವಿದ್ದು ಗಲೀಜು ಮಾಡಿ ಹೋಗುತ್ತಿದ್ದಾರೆ ಎಂದು ಪಾಲಕರು ಹೇಳುತ್ತಿದ್ದಾರೆ.

ಅರಕಲಗೂಡು ತಾಲ್ಲೂಕಿನಲ್ಲಿ ಒಟ್ಟು 11 ಸರ್ಕಾರಿ ಹಾಗೂ ಮೂರು ಅನುದಾನಿತ ಪದವಿಪೂರ್ವ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

ಪಟ್ಟಣದಲ್ಲಿ ಎರಡು ಪದವಿಪೂರ್ವ ಕಾಲೇಜುಗಳಿದ್ದು, ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿವೆ. ಕಳೆದ ವರ್ಷ 397 ವಿದ್ಯಾರ್ಥಿಗಳಿದ್ದು, ಇದು ಈ ಬಾರಿ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. 6 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಕೊಠಡಿ ಸಮಸ್ಯೆ ಇಲ್ಲ.

‘ಕಲಾ ವಿಭಾಗದಲ್ಲಿ 2, ವಿಜ್ಞಾನ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ ಒಬ್ಬ ಉಪನ್ಯಾಸಕರ ಕೊರತೆ ಇದೆ. ರಸಾಯನ ಮತ್ತು ಭೌತವಿಜ್ಞಾನ ಪ್ರಯೋಗಾಲಯಗಳಿದ್ದು, ಜೀವವಿಜ್ಞಾನ ವಿಭಾಗಕ್ಕೆ ಪ್ರಯೋಗಾಲಯ ಬೇಕಿದೆ. 11 ಕಂಪ್ಯೂಟರ್ ಇದ್ದರೂ ಬೋಧಕರಿಲ್ಲ. ಎತ್ತರದ ಕಾಂಪೌಂಡ್ ಅಗತ್ಯವಿದೆ’ ಎನ್ನುತ್ತಾರೆ ಪ್ರಾಂಶುಪಾಲ ಎಂ.ಎಂ.ಧನಂಜಯ.

ಬಾಲಕರ ಕಾಲೇಜಿನಲ್ಲಿ ಮೂರು ವಿಭಾಗಗಳಿವೆ. ಕಲಾ ವಿಭಾಗದಲ್ಲಿ ಒಬ್ಬ ಉಪನ್ಯಾಸಕರು ಮಾತ್ರ ಇದ್ದು, ಅವರೂ ಈ ತಿಂಗಳು ನಿವೃತ್ತಿ ಆಗುತ್ತಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೊರತೆಯನ್ನು ಅತಿಥಿ ಉಪನ್ಯಾಸಕರ ಮೂಲಕ ಸರಿದೂಗಿಸಲಾಗುತ್ತಿದೆ. ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಕಾಲೇಜಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಎರಡು ಶೌಚಾಲಯ ಸುಸ್ಥಿತಿಯಲ್ಲಿದ್ದು, ಇನ್ನೆರಡು ದುರಸ್ತಿ ಆಗಬೇಕಿದೆ. ಈ ಕಾಲೇಜು ತಾಲ್ಲೂಕಿನ ಪ್ರಥಮ ಪದವಿಪೂರ್ವ ಕಾಲೇಜು ಎನಿಸಿದ್ದು, ಸುವರ್ಣ ಮಹೋತ್ಸವ ಆಚರಿಸುತ್ತಿದ್ದರೂ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ.

ನಿರ್ವಹಣೆ: ಚಿದಂಬರಪ್ರಸಾದ,
ಪೂರಕ ಮಾಹಿತಿ: ಜೆ.ಎನ್. ರಂಗನಾಥ್, ಎಚ್.ಎಸ್.ಅನಿಲ್ ಕುಮಾರ್. ಹಿ.ಕೃ. ಚಂದ್ರು, ಸಿದ್ಧರಾಜು, ಜಿ.ಚಂದ್ರಶೇಖರ್, ಮಲ್ಲೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT