ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್‌ ನಾಮಪತ್ರ ಅಸಿಂಧು

Last Updated 26 ಏಪ್ರಿಲ್ 2018, 7:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಅಸಿಂಧುಗೊಳಿಸಿದ್ದು, ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಮಂಜುನಾಥ್‌ ಅವರು 2013ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿ ಹೈಕೋರ್ಟ್‌ ಬುಧವಾರ ಆದೇಶ ನೀಡಿತ್ತು. ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಮೃದ್ಧಿ ಮಂಜುನಾಥ್‌ ನಾಮಪತ್ರ ಪರಿಶೀಲನೆ ವೇಳೆ ಹೈಕೋರ್ಟ್‌ ಆದೇಶವನ್ನು ಪ್ರಸ್ತಾಪಿಸಿ ಕೊತ್ತೂರು ಮಂಜುನಾಥ್‌ರ ನಾಮಪತ್ರದ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದರು.

ಹೀಗಾಗಿ ಚುನಾವಣಾಧಿಕಾರಿ ರಾಚಪ್ಪ ನಾಮಪತ್ರ ಅಂಗೀಕಾರದ ನಿರ್ಣಯವನ್ನು ಗುರುವಾರಕ್ಕೆ(ಏ.26) ಕಾಯ್ದಿರಿಸಿದ್ದರು. ಕೊತ್ತೂರು ಮಂಜುನಾಥ್‌ ಪರ ಸೂಚಕರು, ಏಜೆಂಟರು ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ಬೆಳಿಗ್ಗೆ ಉಮೇದುವಾರಿಕೆ ಪರಿಶೀಲಿಸಿದ ರಾಚಪ್ಪ ನಾಮಪತ್ರ ಅಸಿಂಧು ಎಂದು ಘೋಷಿಸಿದರು.

‘ನಾಮಪತ್ರ ಪರಿಶೀಲನೆ ವೇಳೆ ಹಾಜರಿರುವಂತೆ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ, ಅವರು ಗುರುವಾರ ಸಂಜೆಯೊಳಗೆ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತರುವುದಾಗಿ ತಿಳಿಸಿ ಕಾಲಾವಕಾಶ ಕೋರಿದ್ದರು. ಆದರೆ, ಕಾಲಾವಕಾಶ ಕೊಡಲು ಚುನಾವಣಾ ಆಯೋಗದ ನಿಯಮಾವಳಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಲಾಯಿತು’ ಎಂದು ರಾಚಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಮಂಜುನಾಥ್‌ 2013ರ ಚುನಾವಣೆ ಸಂದರ್ಭದಲ್ಲಿ ನಾಮಪತ್ರದೊಂದಿಗೆ ಕೊಟ್ಟಿದ್ದ ಜಾತಿ ಪ್ರಮಾಣಪತ್ರದ ಜೆರಾಕ್ಸ್‌ ಪ್ರತಿಯನ್ನೇ ಈ ಬಾರಿಯೂ ಸಲ್ಲಿಸಿದ್ದಾರೆ. ಆದರೆ, ಆ ಜಾತಿ ಪ್ರಮಾಣಪತ್ರ ಅಸಿಂಧು ಎಂದು ಹೈಕೋರ್ಟ್‌ ಆದೇಶಿಸಿದೆ. ಇದರಿಂದಾಗಿ ಅವರಿಗೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶವೇ ಇಲ್ಲ’ ಎಂದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT