ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ– ಹಾಸನ ಹೆದ್ದಾರಿ ಗುಂಡಿಮಯ

ರಸ್ತೆಯಲ್ಲಿ ನಿಲ್ಲುತ್ತಿದೆ ಮಳೆ ನೀರು, ವಾಹನ ಸವಾರರಿಗೆ ತಪ್ಪದ ತೊಂದರೆ, ದುರಸ್ತಿಗೆ ಒತ್ತಾಯ
Last Updated 1 ಅಕ್ಟೋಬರ್ 2020, 8:39 IST
ಅಕ್ಷರ ಗಾತ್ರ

ಸಕಲೇಶಪುರ: ಹಾಸನ ಮತ್ತು ಸಕಲೇಶಪುರ ನಡುವಿನ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಮಳೆ ನೀರು ನಿಲ್ಲುತ್ತಿದೆ. ತಗ್ಗು ಪ್ರದೇಶಗಳಲ್ಲಿ ಕೆರೆಯಂತಾಗಿದೆ.

ಈ ರಸ್ತೆಯಲ್ಲಿ ನಿತ್ಯ 30 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಆದರೆ, ಈ ಹೆದ್ದಾರಿ ಗದ್ದೆ ತೋಟಗಳಿಗೆ ಹೋಗುವ ಕಚ್ಛಾ ರಸ್ತೆಯಂತಾಗಿದೆ. ರಸ್ತೆಯ ಡಾಂಬರು ಕಿತ್ತುಬಂದಿದ್ದು, ದ್ವಿಚಕ್ರ ವಾಹನಗಳು ಪ್ರಾಣಭೀತಿಯಲ್ಲಿ ಸಂಚರಿಸುವಂತಾಗಿದೆ.

38 ಕಿ.ಮೀ ದೂರದ ಈ ರಸ್ತೆಯಲ್ಲಿ 35 ನಿಮಿಷದ ಪ್ರಯಾಣಕ್ಕೆ ಈಗ ಒಂದೂವರೆ ಗಂಟೆ ಬೇಕಾಗಿದೆ. ಗುಂಡಿ ಗಳು ಬಿದ್ದಿರುವುದರಿಂದ ವಾಹನಗಳು ಸಂಚರಿಸುವಾಗ ಅಲುಗಾಡುತ್ತವೆ. ಇದರಿಂದ ಬೆನ್ನುಮೂಳೆ ಸಮಸ್ಯೆ ಹೊಂದಿರುವವರು ಹಾಗೂ ವೃದ್ಧರಿಗೆ ತೀವ್ರ ತೊಂದರೆ ಉಂಟಾಗಿದೆ.

ಹಾಸನ– ಬಿ.ಸಿ. ರೋಡ್ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. 2017ರಲ್ಲಿ ಟೆಂಡರ್ ಪಡೆದುಕೊಂಡಿರುವ ಐಸೋಲೆಕ್ಸ್ ಕಂಪನಿ 2019ರ ಮಾರ್ಚ್ 31ಕ್ಕೆ ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಬೇಕಾಗಿತ್ತು. ಸದರಿ ಗುತ್ತಿಗೆದಾರ ಕಂಪನಿ ಆರ್ಥಿಕ ನಷ್ಟದ ಕಾರಣ ನೀಡಿ, ರಾಜಕಮಲ್ ಕಂಪನಿಗೆ ಉಪಗುತ್ತಿಗೆ ನೀಡಿತ್ತು. ಈ ಕಂಪನಿ ಸಹ ಶೇ 20ರಷ್ಟೂ ಕಾಮಗಾರಿ ನಡೆಸಲಿಲ್ಲ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ.

ಈ ರಸ್ತೆ ಮದ್ಯದಲ್ಲಿ ಹೇಮಾವತಿ ನದಿಗೆ ಹೊಸ ಸೇತುವೆ ಹಾಗೂ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ ಇನ್ನೂ ಶುರುವಾಗಿಲ್ಲ. ಹೊಸ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಕಾರಣವನ್ನು ನೀಡುತ್ತಾ, ಈಗಿರುವ ರಸ್ತೆಯನ್ನೂ ಅಭಿವೃದ್ಧಿಪಡಿಸುತ್ತಿಲ್ಲ. ಕಳೆದ ಫೆಬ್ರುವರಿಯಲ್ಲಿ ದೊಡ್ಡ ಗುಂಡಿಗಳನ್ನು ಮುಚ್ಚಿದ್ದರು.

ರಸ್ತೆ ಹದಗೆಟ್ಟಿರುವುದರಿಂದ ವಾಹನಗಳು ಬಹುಬೇಗ ಹಾಳಾಗುತ್ತವೆ. ಪ್ರಯಾಣದ ಅವಧಿ ಹೆಚ್ಚಾಗುವುದ ರಿಂದ ಪೆಟ್ರೋಲ್‌, ಡೀಸೆಲ್‌ ಬಳಕೆಯೂ ಹೆಚ್ಚಾಗುತ್ತದೆ. ಹೀಗಾಗಿ ಕೂಡಲೇ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ತಾಲ್ಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಬಾಳ್ಳು ದಿನೇಶ್ ಆಗ್ರಹಿಸಿದ್ದಾರೆ.

ಹಾಸನದಿಂದ ಸಕಲೇಶಪುರ ಮಾರನಹಳ್ಳಿವರೆಗೂ ಡಾಂಬರ್‌ ಹಾಕಬೇಕು. ಇಲ್ಲವಾದರೆ ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸುವುದಕ್ಕೆ ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಕರಾವಳಿ ಹಾಗೂ ರಾಜಧಾನಿ ನಡುವಿನ ಸಂಚಾರಕ್ಕೆ ಇರುವ ಮುಖ್ಯ ಹೆದ್ದಾರಿ ಇದು. ಹೀಗಾಗಿ, ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ಶೆಟ್ಟಿ ಒತ್ತಾಯಿಸಿದರು.

‘ಕಾಮಗಾರಿ ಪೂರ್ಣಗೊಳ್ಳಲು 3 ವರ್ಷ ಬೇಕು’
ಕುಂಟುತ್ತಾ ಸಾಗಿರುವ ಹಾಸನ–ಬಿ.ಸಿ.ರೋಡ್‌ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೂ ಹಾಲಿ ರಸ್ತೆಗೆ ಡಾಂಬರೀಕರಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಾನು ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಸೂಚಿಸಿದ್ದೇವೆ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ತಿಳಿಸಿದರು.

ರಸ್ತೆ ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿಯಾಗುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮಳೆ ಕಡಿಮೆಯಾಗಿರುವುದರಿಂದ ಕೂಡಲೇ ದುರಸ್ತಿ ಕಾಮಗಾರಿ ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT