ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ರಸ್ತೆ ಸಂಪರ್ಕಕ್ಕೆ ಸರ್ವೇ ನಡೆಸಲು ಆದೇಶ

Last Updated 10 ಜನವರಿ 2022, 15:42 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾನಬಾಳು, ಅವರೇಕಾಡು ಮತ್ತು ಡೋನಹಳ್ಳಿ ಗ್ರಾಮಗಳಿಗೆ ರಸ್ತೆ ನಿರ್ಮಾಣದ ಅಗತ್ಯಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಸ್ವಾತಂತ್ರ್ಯ ಬಂದ ದಿನದಿಂದಲೂ ಈ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿಲ್ಲ’ ಎಂದು ಆರೋಪಿಸಿ ಎ.ಸಿ. ಅಜಯ್ ಸೇರಿದಂತೆ 12 ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಸಕಲೇಶಪುರ ತಾಲ್ಲೂಕು ಕೇಂದ್ರ ಸಂಪರ್ಕಿಸಲು ಹಾನಬಾಳು, ಅವರೇಕಾಡು ಮತ್ತು ಡೋನಹಳ್ಳಿ ಗ್ರಾಮಗಳಿಗೆ ರಸ್ತೆ ಇಲ್ಲವಾಗಿದೆ. ಸ್ವಾತಂತ್ರ್ಯ ದೊರೆತ ಕಾಲದಿಂದಲೂ ಈ ಮೂರು ಗ್ರಾಮಗಳಿಗೆ ರಸ್ತೆ ಸಂಪರ್ಕ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಗರ್ಭಿಣಿಯರು, ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರಕ್ಕೆ ಕೊಂಡೊಯ್ಯಲು ಕಷ್ಟವಾಗುತ್ತಿದೆ’ ಎಂದು ವಿವರಿಸಿದರು.

‘ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ2021ರ ಜನವರಿ 13ರಂದು ಮನವಿಪತ್ರ ಸಲ್ಲಿಸಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಕೋರಲಾಗಿತ್ತು. ಆದರೆ, ಆ ಮನವಿ ಪತ್ರವನ್ನು ಪರಿಗಣಿಸಿಲ್ಲ. ಅಂತೆಯೇ ಈ ಅರ್ಜಿಯಲ್ಲಿ ಸಕಲೇಶಪುರ ಶಾಸಕರನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ’ ಎಂಬ ಅಂಶವನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ,‘ರಸ್ತೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿದಾರರ ಗ್ರಾಮಗಳಿಗೆ ರಸ್ತೆ ಅಗತ್ಯವಿರುವ ಬಗ್ಗೆ ತಿಳಿಯಲು ಸರ್ವೇ ನಡೆಸಬೇಕು. ಒಂದೊಮ್ಮೆ, ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಕಂಡುಬಂದರೆ, ತಕ್ಷಣವೇ ಕಾಮಗಾರಿ ಆರಂಭಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT