ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಹಸನಾಗಲೇ ಇಲ್ಲ ಹಸಲರ ಬದುಕು

ಹುಲ್ಲಹಳ್ಳಿ ಗ್ರಾಮದಲ್ಲಿ 50 ವರ್ಷಗಳಿಂದ ವಾಸ, ಇನ್ನೂ ಸಿಗದ ಮೂಲಸೌಲಭ್ಯ
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಸಕಲೇಶಪುರ: ದೇಶಕ್ಕೆ ಸ್ವಾತಂತ್ರ್ಯ ದೊರೆತು 7 ದಶಕ ಕಳೆದರೂ ತಾಲ್ಲೂಕು ಕೇಂದ್ರದ ಕೂಗಳತೆ ದೂರದಲ್ಲಿ ಇರುವ ಹುಲ್ಲಹಳ್ಳಿ ಗ್ರಾಮದಲ್ಲಿ 28 ಕುಟುಂಬಗಳು ವಿದ್ಯುತ್, ಕುಡಿಯುವ ನೀರು, ರಸ್ತೆ, ವಸತಿ ಸೌಲಭ್ಯಗಳಿಲ್ಲದೆ ಪ್ಲಾಸ್ಟಿಕ್‌ ಹೊದಿಕೆಯ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

‘ಹುಲ್ಲಹಳ್ಳಿ ಸರ್ವೆ ನಂಬರ್‌ 16ರಲ್ಲಿ ಮೂಲ ಆದಿವಾಸಿ ಹಸಲರು ಸಮುದಾಯದ ಕುಟುಂಬಗಳು ಕಳೆದ 50 ವರ್ಷಗಳಿಂದ ಟಾರ್ಪಲ್‌, ಪ್ಲಾಸ್ಟಿಕ್‌ ಹೊದಿಕೆಯ ಗುಡಿಸಲುಗಳಲ್ಲಿ, ಕೆಲವರು ಗೋಡೆ ಕಟ್ಟಿ ಹೆಂಚು ಹಾಕಿರುವ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 108 ಜನರಿದ್ದು ಇವರು ಕೇಳುತ್ತಿರುವ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸೇರಿದಂತೆ ಯಾವುದೇ ಒಂದು ಇಲಾಖೆಯೂ ಒದಗಿಸಿಲ್ಲ’ ಎಂದು ಅಲ್ಲಿನ ವಾಸಿಗಳು ಆರೋಪಿಸಿದ್ದಾರೆ.

‘ಊರಿನಲ್ಲಿರುವ ಮನೆಗಳಲ್ಲಿ ವಿದ್ಯುತ್‌ ದೀಪ ಉರಿಯುತ್ತಿದ್ದರೂ ನಮ್ಮ ಮನೆಗಳು ಕತ್ತಲೆಯಿಂದ ಮುಳುಗಿವೆ. ಸೀಮೆಎಣ್ಣೆ ದೀಪ, ಕ್ಯಾಂಡಲ್‌ ಬೆಳಕಿನಲ್ಲಿ ಬಹಳ ಕಷ್ಟದಲ್ಲಿ ಬದುಕು ಕಳೆಯುತ್ತಿದ್ದೇವೆ. ಮಳೆ ಹಾಗೂ ಚಳಿಯಲ್ಲಿ ವಯಸ್ಸಾದವರು, ಮಕ್ಕಳು ನಡುಗುತ್ತಾ ಮುದುಡಿಕೊಂಡು ಕೂರಬೇಕಾಗಿದೆ. ಆನೇಮಹಲ್‌–ಬ್ಯಾಕರವಳ್ಳಿ ನಡುವಿನ ಮುಖ್ಯರಸ್ತೆ ಬದಿಯಲ್ಲಿ ನೀರಿನ ತೊಟ್ಟಿ ಇದ್ದು ಅಲ್ಲಿಂದ ನೀರು ಹೊತ್ತು ತಬೇಕು. ಇರುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆಯಾಗುತ್ತದೆ. ನಮಗೇಕೆ ಸರ್ಕಾರ ಇನ್ನೂ ಸೌಲಭ್ಯಗಳನ್ನು ಒದಗಿಸಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ವಾಸಿಗಳು.

ಭೂಮಿ ವಂಚಿತರು: ‘ಪಶ್ಚಿಮಘಟ್ಟ ಪ್ರದೇಶದ ಕಾಡುಗಳಲ್ಲಿ ವಾಸ ಮಾಡುತ್ತಿದ್ದ ನಮ್ಮ ಹಿರಿಕರನ್ನು ಸರ್ಕಾರ 1950–60ರ ಸುಮಾರಿಗೆ ಒಕ್ಕಲೆಬ್ಬಿಸಿದಾಗ ತಾಲ್ಲೂಕಿಗೆ ಬಂದ ಇವರು ಕಾಫಿ ತೋಟಗಳ ಲೈನ್‌ ಮನೆಗಳಲ್ಲಿ ಇದ್ದು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಳಿಕ ಸರ್ಕಾರಿ ಭೂಮಿಯಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಅಲ್ಲಿ ಹೊಸ ಜೀವನ ಶುರು ಮಾಡಿದ್ದರು. ನಾವು ವಾಸ ಮಾಡುತ್ತಿರುವ ಆ ಜಾಗವನ್ನು ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಿ ಎಂದು ಕಳೆದ 20 ವರ್ಷಗಳಿಂದ ಫಾರಂ ನಂಬರ್‌ 94ಸಿ, 54, 53ನಲ್ಲಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದೇವೆ. ಈ ವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಬದಲಿಗೆ ಈ ಜಾಗವನ್ನು ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿಗೆ ಮಂಜೂರು ಮಾಡಲು ಮುಂದಾಗಿದ್ದಾರೆ’ ಎಂದು ಇಲ್ಲಿನ ನಿವಾಸಿ, ಹಸಲರು ಸಂಘದ ತಾಲ್ಲೂಕು ಕಾರ್ಯದರ್ಶಿ ಸುಂದರ್‌ ಆರೋಪಿಸಿದ್ದಾರೆ.

‘ಗುಡಿಸಲು ಮುಕ್ತ, ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿ ಬಜೆಟ್‌ನಲ್ಲಿ ಖರ್ಚು ಮಾಡುತ್ತಿದೆ. ಆದರೆ ಇಲ್ಲಿ ದಶಕಗಳಿದಂ ಗುಡಿಸಲಿನಲ್ಲಿ ವಾಸಿಸುತ್ತಿರುವ ಹಸಲರ ಕುಟುಂಬಗಳಿಗೆ ಇನ್ನೂ ಸೌಲಭ್ಯಗಳನ್ನು ಒದಗಿಸದೆ ಅನ್ಯಾಯ ಮಾಡಲಾಗುತ್ತಿದೆ. ಇವರ ಕಲ್ಯಾಣಕ್ಕಾಗಿಯೇ ಇರುವ ಪರಿಶಿಷ್ಟ ವರ್ಗಗಳ ನಿರ್ದೇಶನಾಲಯ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆ, ಕೇಂದ್ರ ಬುಡಕಟ್ಟು ಮಂತ್ರಾಲಯ ಇವರಿಗೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಹಾಸನ ಜಿಲ್ಲಾ ಆದಿವಾಸಿ ಹಸಲರು ಮತ್ತು ಗಿರಜನ ಸಂಘದ ಜಿಲ್ಲಾ ಅಧ್ಯಕ್ಷ ಎನ್‌.ಎಸ್‌.ನವೀನ್‌ ಸದಾ.

*
ಮೂಲಸೌಲಭ್ಯಗಳಿಂದ ಯಾರೂವಂಚಿತರಾಗಬಾರದು, ಈ ಬಗ್ಗೆ ಶೀಘ್ರದಲ್ಲಿ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು
-ಗಿರೀಶ್‌ ನಂದನ್‌, ಉಪವಿಭಾಗಾಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT