‘ಸಾಲಮನ್ನಾ’ ಅನುಷ್ಠಾನದಲ್ಲಿ ಹಾಸನ ಜಿಲ್ಲೆ ಪ್ರಥಮ

7
ದಾಖಲೆ ಪರಿಶೀಲನೆ ನಿರಂತರ ಪ್ರಕ್ರಿಯೆ, ಆತಂಕ ಬೇಡ: ರೇವಣ್ಣ

‘ಸಾಲಮನ್ನಾ’ ಅನುಷ್ಠಾನದಲ್ಲಿ ಹಾಸನ ಜಿಲ್ಲೆ ಪ್ರಥಮ

Published:
Updated:
Prajavani

ಹಾಸನ: ‘ಸಾಲ ಮನ್ನಾ ಯೋಜನೆ ಅನುಷ್ಠಾನ ಹಾಗೂ ದಾಖಲೆ ಸಂಗ್ರಹದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ದಾಖಲೆ ಪರಿಶೀಲನೆ ನಿರಂತರ ಪ್ರಕ್ರಿಯೆಯಾಗಿರುವ ಕಾರಣ ರೈತರು ಭಯಪಡುವ ಅಗತ್ಯವಿಲ್ಲ’ ಎಂದು ಸಚಿವ ಎಚ್.ಡಿ.ರೇವಣ್ಣ ಅಭಯ ನೀಡಿದರು.

‘ದಾಖಲೆ ಸಂಗ್ರಹಕ್ಕೆ ಸಾಕಷ್ಟು ಅವಕಾಶ ಇದೆ. ಪಹಣಿ, ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ ತಪ್ಪು ಇದ್ದಲ್ಲಿ ಅವುಗಳ ಪರಿಶೀಲನೆ ನಡೆಸಲು ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ದೆಹಲಿ, ಗುಜರಾತ್‌ ರಾಜ್ಯದ ಅಧಿಕಾರಿಗಳು ಜಿಲ್ಲೆಗೆ ಬಂದು ಅಧ್ಯಯನ ಮಾಡಿದ್ದಾರೆ. ಹಾಸನ ಮಾದರಿಯಲ್ಲೇ ಎಲ್ಲಾ ಜಿಲ್ಲೆಗಳಲ್ಲೂ ಪ್ರಗತಿ ಸಾಧಿಸಲಿ’ ಎಂದು ತಿಳಿಸಿದರು.

‘ಸಾಲದ ಮೊತ್ತ ರೈತರ ಖಾತೆಗೆ ಆನ್‌ಲೈನ್‌ ಮೂಲಕ ಜಮಾ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರ ಕೈಯಿಂದಲೇ ರೈತರಿಗೆ ಸಾಲ ತೀರುವಳಿ ಪತ್ರ ಕೊಡಿಸಲಾಗುವುದು’ ಎಂದರು.

ರೈತರ ಸಾಲ ಮನ್ನಾ ವಿಚಾರಕ್ಕೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ‘ಸಾಲ ಮನ್ನಾ ಯೋಜನೆಯಿಂದ ಸಾಕಷ್ಟು ರೈತರಿಗೆ ಅನುಕೂಲ ಆಗಲಿದೆ. ಆನ್‌ಲೈನ್‌ ಮೂಲಕ ರೈತರ ಖಾತೆಗೆ ಹಣ ಜಮಾ ಆಗಲಿದೆ. ಇದರಲ್ಲಿ ಸೆಟಲ್ ಮೆಂಟ್ ಎಂಬ ಮಾತೇ ಬರುವುದಿಲ್ಲ. ಯಡಿಯೂರಪ್ಪ ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು’ ಎಂದು ಹೇಳಿದರು.

‘ನಾಲೆಗಳ ಹೂಳು ತೆಗೆಸಿ, ಸರಾಗವಾಗಿ ನೀರು ಹರಿಯಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಯೋಜನಾ ವರದಿ ಸಿದ್ಧಪಡಿಸಿ, ಮುಂದಿನ ಜೂನ್ ತಿಂಗಳ ಒಳಗೆ ಎಲ್ಲಾ ಕಾಮಗಾರಿಗಳು ಮುಗಿದಿರಬೇಕು ಎಂದು ನೀರಾವರಿ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ’ ಎಂದರು.

‘ವಾಣಿಜ್ಯ ಬೆಳೆ ಆಲೂಗೆಡ್ಡೆ ನಾಶವಾಗಿ ರೈತರು ನಿರಂತರವಾಗಿ ನಷ್ಟ ಅನುಭವಿಸಿದ್ದಾರೆ. ಆಲೂಗೆಡ್ಡೆ ಬಿತ್ತನೆ ಬೀಜ ಖರೀದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ರೈತರು, ವರ್ತಕರು, ಅಧಿಕಾರಿಗಳು ಸೇರಿದಂತೆ ಒಂದು ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನುಡಿದರು.

‘ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆ ಸಮಸ್ಯೆ ಇರುವ ಕಡೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ 5ನೇ ತರಗತಿಯಿಂದ ಪಿಯುಸಿ ವರೆಗೆ ಬಾಲಕರ ಹಾಗೂ ಬಾಲಕಿಯರ ಎರಡು ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲಿ ಸುಮಾರು 50 ರಿಂದ 60 ವರ್ಷಗಳ ಹಳೆಯ ಶಾಲೆ, ಕಾಲೇಜು ಕಟ್ಟಡಗಳನ್ನು ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸ್ವೀಕರಿಸಲಾಗಿದೆ. ಎಲ್ಲಾ ಶಾಲೆಗಳಿಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಶಾಲಾ, ಕಾಲೇಜುಗಳ ಕಟ್ಟಡ ದುರಸ್ತಿಗಾಗಿ ಜಿಲ್ಲೆಗೆ ₹ 4.50 ಕೋಟಿ ಬಿಡುಗಡೆಯಾಗಿದ್ದು, ಲೋಕೋಪಯೋಗಿ ಇಲಾಖೆ ಮುಖಾಂತರ ಅನುಷ್ಠಾಗೊಳಿಸಲಾಗುತ್ತಿದೆ. ಹಿಂದೆ ಭೂಸೇನಾ ನಿಗಮ, ನಿರ್ಮಿತಿ ಕೇಂದ್ರದ ಮೂಲಕ ಮಾಡಲಾಗುತ್ತಿತ್ತು. ಈಗ ದುರಸ್ತಿ ಕಾರ್ಯವನ್ನು ಪಿಡಬ್ಲೂಡಿಗೆ ವಹಿಸಿರುವುದರಿಂದ ಸರ್ಕಾರಕ್ಕೆ ಶೇಕಡಾ 30ರಷ್ಟು ಉಳಿತಾಯ ಆಗಲಿದೆ. ಆ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅವರೇ ಮಾಡುವುದಾದರೆ ಅಭ್ಯಂತರ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಪಟೇಲ್‌ ಶಿವಣ್ಣ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !