7
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಅಗಿಲೆ ಯೋಗೇಶ್ ಒತ್ತಾಯ

ಸಾಲಗಾಮೆ ಹೋಬಳಿ ಕೆರೆಗಳಿಗೂ ನೀರು ತುಂಬಿಸಿ

Published:
Updated:
ಅಗಿಲೆ ಯೋಗೇಶ್‌

ಹಾಸನ : ‘ತಾಲ್ಲೂಕಿನ ಸಾಲಗಾಮೆ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ 3ನೇ ಹಂತದ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು ಕ್ರಮ ಕೈಗೊಳ್ಳಬೇಕಿದೆ’ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೇಶ್ ಒತ್ತಾಯಿಸಿದರು.

‘ರಾಜ್ಯ ಸರ್ಕಾರರದ ಬಜೆಟ್ ನಲ್ಲಿ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹ 70 ಕೋಟಿ ಅನುದಾನ ನೀಡಲಾಗಿದೆ. ಸಾಲಗಾಮೆ ಕೆರೆಗಳಿಗೆ ನೀರು ತುಂಬಿಸುವಂತೆ ಹಲವು ದಿನಗಳಿಂದ ನೀರಾವರಿ ಹೋರಾಟ ಸಮಿತಿ ಮೂಲಕ ಒತ್ತಾಯಿಸಿದ್ದರೂ ಕಡೆಗಣಿಸಲಾಗಿದೆ. ಶಾಂತಿಗ್ರಾಮ ಮತ್ತು ದುದ್ದ ಹೋಬಳಿ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಬದಲು, ಯಗಚಿ ಜಲಾಶಯದ ಮೂಲಕ ನೀರು ಹರಿಸಿದ್ದರೆ ಸಾಲಗಾಮೆ ಕೆರೆಗಳನ್ನೂ ತುಂಬಿಸಬಹುದಿತ್ತು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಹಾಸನ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಉದ್ದೇಶಿತ ಕಾಮಗಾರಿಗಳಿಗೆ ಅನುದಾನ ನೀಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿರಬಹುದು. ಆದರೆ, ಇಲ್ಲಿಯ ಜನ ಜೆಡಿಎಸ್‌ ಅಭ್ಯರ್ಥಿಗೂ 50 ಸಾವಿರ ಮತ ನೀಡಿದ್ದಾರೆ ಎಂಬುದನ್ನು ಮರೆಯಬಾರದು’ ಎಂದರು.

‘ರೇವಣ್ಣ ಅವರ ಅಧಿಕಾರವಧಿಯಲ್ಲಿ ಪ್ರಾರಂಭವಾಗಿದ್ದ ಹಾಸನ ಡೈರಿಯಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್‌ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ರಸ್ತೆಗೆ ಭೂಮಿ ನೀಡಿದ ರೈತರಿಗೆ ಕಾನೂನು ಪ್ರಕಾರ ಸೂಕ್ತ ಪರಿಹಾರ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ರೇವಣ್ಣ ಮನಸ್ಸು ಮಾಡಿದರೆ ಇದು ಕೇವಲ 24 ಗಂಟೆ ಕೆಲಸ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ. ಸಹಕಾರ ಸದಾ ಇದ್ದೇ ಇರುತ್ತದೆ’ ಎಂದು ಹೇಳಿದರು.

‘ಹಾಸನ ವರ್ತುಲ ರಸ್ತೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ₹ 30 ಕೋಟಿ ಅನುದಾನ ನೀಡಲಾಗಿದೆ. ಅದೇ ರೀತಿ ಬೇಲೂರು ರಿಂಗ್ ರಸ್ತೆಯನ್ನು ಪೂರ್ಣಗೊಳಿಸಲಿ. ರೇವಣ್ಣ ವಿರೋಧ ಪಕ್ಷದಲ್ಲಿದ್ದಾಗ ಪ್ರತಿ ಬಾರಿಯೂ ಆಲೂಗೆಡ್ಡೆ ಬೆಳೆ ನಷ್ಟದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು. ಆದರೆ ಈ ಬಾರಿ ಅತಿಯಾದ ಮಳೆಯಿಂದ ಆಲೂಗೆಡ್ಡೆ ಮತ್ತು ಮೆಕ್ಕೆಜೋಳ ಬೆಳೆಗಾರರು ನಷ್ಟದಲ್ಲಿದ್ದು, ಅವರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಬಿಟ್ಟಗೌಡನಹಳ್ಳಿ ಸುರೇಶ್‌, ಶ್ರೀನಿವಾಸ್‌, ಮಂಜುನಾಥ್‌ ಶರ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !