ಸಮಸ್ಯೆ ನಿವಾರಣೆಗೆ ‘ಹಲೋ ಜಿಲ್ಲಾ ಪಂಚಾಯಿತಿ’

7
29 ಇಲಾಖೆಗಳ ಅಧಿಕಾರಿಗಳು ಭಾಗಿ, ವಾರದಲ್ಲಿ ಪರಿಹಾರ

ಸಮಸ್ಯೆ ನಿವಾರಣೆಗೆ ‘ಹಲೋ ಜಿಲ್ಲಾ ಪಂಚಾಯಿತಿ’

Published:
Updated:
Deccan Herald

ಹಾಸನ: ಗ್ರಾಮೀಣ ಭಾಗದ ಜನರ ಸಮಸ್ಯೆ ಪರಿಹರಿಸುವ ಸಲುವಾಗಿ ‘ಹಲೋ ಜಿಲ್ಲಾ ಪಂಚಾಯಿತಿ’ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರತಿ ತಿಂಗಳು ಒಂದು ದಿನ ಬೆಳಿಗ್ಗೆ 9 ರಿಂದ 10 ರವರೆಗೆ ಜನರು ತಮ್ಮ ಸಮಸ್ಯೆಗಳನ್ನು ಮನೆಯಿಂದಲೇ ದೂರವಾಣಿ ಕರೆ ಮಾಡಿ ಹೇಳಿಕೊಳ್ಳಬಹುದು. ಜಿಲ್ಲೆಯ 28 ಇಲಾಖೆ ಅಧಿಕಾರಿಗಳು, ಎಂಟು ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಅಹವಾಲು ಆಲಿಸುವರು. ವಾರದೊಳಗೆ ಪರಿಹಾರ ಸೂಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಕೇಂದ್ರಕ್ಕೆ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಲು ಪರದಾಡಬೇಕಿಲ್ಲ. ಅವರ ಮನೆ ಬಾಗಿಲಿಗೆ ಅಧಿಕಾರಿಗಳು ತೆರಳಿ, ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ಆ. 13 ರಂದು ಸಾರ್ವಜನಿಕರು ಈ ದೂರವಾಣಿ 08172–260201, 08172–260202, 08172–260203, 08172–260204, 08172–260205 ಸಂಖ್ಯೆಗಳಿಗೆ ಕರೆ ಮಾಡಿ ಕೊಂದು ಕೊರತೆ ತಿಳಿಸಬಹುದು. ಅದೇ ರೀತಿ ಸೆ. 10, ಅ.10, ನ. 9 ಮತ್ತು ಡಿ. 10 ರಂದು ಸಹ ದೂರು ದಾಖಲಿಸಬಹುದು ಎಂದು ಮಾಹಿತಿ ನೀಡಿದರು.

ಅಲ್ಲದೇ, ಸಮಸ್ಯೆಗಳ ಬಗ್ಗೆ ವಾಟ್ಸ್ಆ್ಯಪ್ ಸಂಖ್ಯೆ 94808867000 ಗೂ ಸಂದೇಶ ಕಳುಹಿಸಬಹುದು. ಫೇಸ್ ಬುಕ್ ಖಾತೆ ZILLAPANCHAYATHASSAN, ಟ್ವಿಟರ್‌ ಐಡಿ CEO_ZPHASSAN ಮೂಲಕವೂ ದೂರು ದಾಖಲಿಸಬಹುದು ಎಂದರು.

‘ಗ್ರಾಮ ಪಂಚಾಯಿತಿಯಲ್ಲಿ ಕೆಲಸವಾಗದಿದ್ದರೆ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸತಾಯಿಸಿದರೆ ಸಾರ್ವಜನಿಕರು ನೇರವಾಗಿ ನನ್ನ ದೂರವಾಣಿಗೆ ಕರೆ ಮಾಡಿ ತಿಳಿಸಬಹುದು’ ಎಂದರು.

ಆಶ್ರಯ ಮನೆ ಹಂಚಿಕೆಯಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಖದ್ದು ಮನೆಗಳಿಗೆ ಭೇಟಿ ನೀಡಿದಾಗ ಅನರ್ಹರು ನೀಡಿರುವುದು ಕಂಡು ಬಂತು. ಒಬ್ಬರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದರೆ, ಮತ್ತೊಬ್ಬರು ಸ್ಥಿತಿವಂತರಾಗಿ
ಕೊಟ್ಟಿಗೆ ನಿರ್ಮಿಸಿದ್ದಾರೆ. ಇವರಿಗೆ ನೋಟಿಸ್ ಜಾರಿ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜತೆಗೆ ಫಲಾನುಭವಿಗಳಿಂದ ಹಣ ವಾಪಸ್ ಪಡೆಯಲಾಗುವುದು ಎಂದು ಎಚ್ಚರಿಸಿದರು.

60 ಸರ್ಕಾರಿ ಶಾಲೆಗಳ ದುರಸ್ತಿಗೆ ₹ 9 ಕೋಟಿ ಬಿಡುಗಡೆಯಾಗಿದೆ. 600 ಶಾಲಾ ಕಟ್ಟಡಗಳ ತುರ್ತು ರಿಪೇರಿ ಹಾಗೂ 300 ಅಂಗನವಾಡಿ ದುರಸ್ತಿಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸದಾಗಿ ಉದ್ಯೋಗ ಖಾತ್ರಿ ಅಡಿ ತಲಾ ₹ 8 ಲಕ್ಷ ವೆಚ್ಚದಲ್ಲಿ 200 ಅಂಗನವಾಡಿ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ 71 ಮಕ್ಕಳ ಮನೆಗೆ ಅನುದಾನ ನೀಡುವ ಕುರಿತು ಶಿಕ್ಷಣ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !