7
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಭವಿಷ್ಯ

ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲ್ಲ

Published:
Updated:
ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು

ಹಾಸನ : ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಿನಕ್ಕೆ ಹತ್ತಾರು ಪತ್ರ ಬರೆಯುತ್ತಿದ್ದ ಸಂಸದ ಎಚ್.ಡಿ.ದೇವೇಗೌಡರು, ತಮ್ಮ ಮಗ ಮುಖ್ಯಮಂತ್ರಿ ಆಗಿರುವ ಕಾರಣ ಮೌನ ವೃತ್ತದಲ್ಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಟೀಕಿಸಿದರು.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.  ‘ಮುಖ್ಯಮಂತ್ರಿ ಸ್ಥಾನದಲ್ಲಿ ಪುತ್ರ ಕುಮಾರಸ್ವಾಮಿ ಹೊರತಾಗಿ ಬೇರೆಯವರು ಇದ್ದರೆ ಕಿರುಕುಳ ನೀಡುತ್ತಿದ್ದರು. ರಾಜ್ಯದ ಜನರಿಗೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಕುರಿತು ಅಸಮಾಧಾನವಿದೆ. ಜೆಡಿಎಸ್ ಗೆ ಮತ ನೀಡಿದ ಹಾಸನ, ಮಂಡ್ಯ ಹಾಗೂ ಮೈಸೂರು ಜನರು ಈಗ ಪಶ್ಚಾತಾಪ ಪಡುತ್ತಿದ್ದಾರೆ ’ ಎಂದು ಹೇಳಿದರು.

‘ಕಾಂಗ್ರೆಸ್ ಮುಖಂಡರು ಏನು ಮಾತನಾಡದಂತೆ ಹೈಕಮಾಂಡ್ ಆಜ್ಞೆ ಹೊರಡಿಸಿದೆ. ಹೀಗಾಗಿ ದೇವೇಗೌಡರ ಅಣತಿಯಂತೆ ಸರ್ಕಾರ ನಡೆಯುತ್ತಿದೆ. ಆದರೆ, ಇದು ಹೆಚ್ಚು ದಿನ ಉಳಿಯುವ ಸರ್ಕಾರವಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಎರಡು ಪಕ್ಷಗಳಿಗೆ ಪಾಠ ಕಲಿಸಬೇಕಿದೆ. ರಾಜ್ಯದಲ್ಲಿ ಅಪವಿತ್ರ ಮೈತ್ರಿ ಜಾರಿಯಲ್ಲಿದೆ. ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವ ಭರವಸೆಯನ್ನು ಕುಮಾರಸ್ವಾಮಿ ಈಡೇರಿಸಿಲ್ಲ’ ಎಂದು ಆರೋಪಿಸಿದರು.

‘ಅರ್ಧಕ್ಕೆ ನಿಂತಿರುವ ರಿಂಗ್ ರಸ್ತೆಯನ್ನೇ ಪೂರ್ಣಗೊಳಿಸಿಲ್ಲ. ಆದರೆ, ಹೊರ ವರ್ತುಲ ರಸ್ತೆಗೆ ₹ 30 ಕೋಟಿ ಅನುದಾನ ನೀಡಲಾಗಿದೆ. ಈ ರಸ್ತೆ ಹಾದು ಹೋಗಿರುವ ಕಡೆ ಸಚಿವ ರೇವಣ್ಣ ಅವರ ಸಂಬಂಧಿಕರು ಅಥವಾ ಅವರದ್ದೇ ಜಮೀನು ಇರಬಹುದು. ದುದ್ದ ಮತ್ತು ಶಾಂತಿಗ್ರಾಮ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು ₹ 70 ಕೋಟಿ ಅನುದಾನ ನೀಡಲಾಗಿದೆ. ಈ ಎರಡೂ ಹೋಬಳಿಗಳು ರೇವಣ್ಣ ಪ್ರತಿನಿಧಿಸುವ ಕ್ಷೇತ್ರಕ್ಕೆ ಸೇರುವುದರಿಂದ ಅವರಿಗೆ ಲಾಭ ಆಗಲಿದೆ. ಆದರೆ ಸಾಲಗಾಮೆ ಹೋಬಳಿ ಕಡೆಗಣಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಗೆ ಯಾವುದೇ ಕೈಗಾರಿಕೆ ತರುವ ಕೆಲಸ ಮಾಡಿಲ್ಲ. ಉದ್ಯೋಗ ಸೃಷ್ಟಿಸುವ ಯಾವುದೇ ಕೆಲಸ ಮಾಡಿಲ್ಲ. ನೀರಾವರಿ ಯೋಜನೆ, ಆನೆ ಕಾರಿಡಾರ್‌ ನಿರ್ಲಕ್ಷ್ಯ ಮಾಡಲಾಗಿದೆ. ಜಿಲ್ಲೆಯ ಬೇಲೂರು, ಅರಸೀಕೆರೆ, ಸಕಲೇಶಪುರ, ಆಲೂರು ತಾಲ್ಲೂಕುಗಳನ್ನು ಕಡೆಗಣಿಸಲಾಗಿದೆ. ಕಾಫಿ, ಏಲಕ್ಕಿ ಮತ್ತು ಆಲೂಗೆಡ್ಡೆ ಬೆಳೆಗಾರರ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಆದರೆ ಹಾಲಿನ ಡೈರಿಗೆ ಹಣ ನೀಡಲಾಗಿದೆ. ಈ ಎಲ್ಲದರ ಉದ್ದೇಶ ರೇವಣ್ಣ ಹಾಗೂ ಅವರ ಹಿಂಬಾಲಕ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವುದೇ ಆಗಿದೆ’ ಎಂದು ದೂರಿದರು.

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಭುವನಾಕ್ಷ, ಮುಖಂಡರಾದ ರೇಣುಕುಮಾರ್, ನವಿಲೆ ಅಣ್ಣಪ್ಪ, ಕೃಷ್ಣ, ಬಿ.ವಿ. ಕರೀಗೌಡ, ಸುಶಿಲಾ ಅಣ್ಣಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !