ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರ ನೆರವು ಅಗತ್ಯ: ಎಚ್.ಡಿ.ರೇವಣ್ಣ

7
ಚೈತನ್ಯ ವೃದ್ಧಾಶ್ರಮದ ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟನೆ

ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರ ನೆರವು ಅಗತ್ಯ: ಎಚ್.ಡಿ.ರೇವಣ್ಣ

Published:
Updated:
Deccan Herald

ಹಾಸನ : ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವವರಿಗೆ ನೆರವು, ಪ್ರೋತ್ಸಾಹ, ಸಹಕಾರ ನೀಡುವುದು ಎಲ್ಲರ ಕರ್ತವ್ಯ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ನಗರದ ಹೊರ ವಲಯದ ಗವೇನಹಳ್ಳಿಯ ಕಾಮದೇನು ಸಹಕಾರಿ ವಿದ್ಯಾಶ್ರಮದ ಚೈತನ್ಯ ವೃದ್ಧಾಶ್ರಮದಲ್ಲಿ ನಿರ್ಮಿಸಿರುವ ಎರಡನೇ ಅಂತಸ್ತಿನ ಆನಂದ ಸದನ ಮತ್ತು ನಂದಗೋಕುಲ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಡಾ.ಗುರುರಾಜ್ ಹೆಬ್ಬಾರ್ ಸ್ವಾರ್ಥ ಇಲ್ಲದೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ವೃದ್ಧಾಶ್ರಮ ನಡೆಸುವುದು ಸುಲಭದ ಕೆಲಸವಲ್ಲ. ಇಲ್ಲಿ ಸುಮಾರು 129 ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು ಸಹ ಪ್ರಾಮಾಣಿಕ ಅಧಿಕಾರಿ. ಅವರು ರೈತರ, ಬಡವರ ಕೆಲಸ ಮಾಡಲಿ ಎಂದು ನುಡಿದರು

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ‘ಬಹಳ ದಿನಗಳಿಂದ ಮಾವನವರಿಗೂ (ದೇವೇಗೌಡ) ವೃದ್ಧಾಶ್ರಮ ಸ್ಥಾಪಿಸುವ ಆಸೆ ಇತ್ತು. ರಾಜಕೀಯ ಒತ್ತಡದಿಂದ ಸಾಧ್ಯವಾಗಲಿಲ್ಲ. ಪ್ರಜ್ವಲ್ ರೇವಣ್ಣಗೂ ವೃದ್ಧಾಶ್ರಮದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಪ್ರತಿ ವರ್ಷ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬದಂದು ವೃದ್ಧಾಶ್ರಮಕ್ಕೆ ₹ 1 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಚೈತನ್ಯ ಮಂದಿರದ (ವೃದ್ಧಾಶ್ರಮ) ಅಧ್ಯಕ್ಷ ಡಾ.ಗುರುರಾಜ್ ಹೆಬ್ಬಾರ್ ಮಾತನಾಡಿ, ‘ಪ್ರಜ್ವಲ್ ಅವರು ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ ನೀಡಿದ್ದಾರೆ’ ಎಂದರು.

₹ 1.38 ಕೋಟಿ ವೆಚ್ಚದ ಆನಂದ ಸದನ ಮತ್ತು ನಂದಗೋಕುಲ ಕಟ್ಟಡ, ₹ 7 ಲಕ್ಷ ವೆಚ್ಚದ ಟೈಲ್ಸ್ ಕಾಮಗಾರಿ ಹಾಗೂ ₹ 7 ಲಕ್ಷದಲ್ಲಿ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಚೈತನ್ಯ ಮಂದಿರ (ವೃದ್ಧಾಶ್ರಮ)ದ ಪರಿಚಯವಿರುವ ಕಿರು ಹೊತ್ತಿಗೆಯನ್ನು ರೇವಣ್ಣ ಬಿಡುಗಡೆ ಮಾಡಿದರು.

ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಖಜಾಂಚಿ ಆನಂದ್ ಬಾಗಡೆ, ಉದ್ಯಮಿ ಗೋವಿಂದರಾಜ್ ಶೆಟ್ಟಿ, ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್, ಸಾಮಾಜಿಕ ಕಾರ್ಯಕರ್ತ ವೈ.ಎಸ್.ವೀರಭದ್ರಪ್ಪ, ಪತ್ರಕರ್ತ ಬಿ.ಆರ್‌.ಉದಯ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್‌ ಹಾಗೂ ಸ್ವರ್ಣಲತಾ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !