ಸಾಮಾಜಿಕ ಸಮಾನತೆಗೆ ಹೋರಾಟ ಅಗತ್ಯ

7
ಬಿಎಸ್‌ಪಿ ಪದಾಧಿಕಾರಿಗಳ ಸಮಾವೇಶದಲ್ಲಿ ಸಂಯೋಜಕ ತೋಮರ್‌

ಸಾಮಾಜಿಕ ಸಮಾನತೆಗೆ ಹೋರಾಟ ಅಗತ್ಯ

Published:
Updated:
Prajavani

ಹಾಸನ: ದೇಶದಲ್ಲಿ ಶೋಷಿತರು ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಸ್ವಾವಲಂಬನೆಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಇದೆ ಎಂದು ಬಿಎಸ್ ಪಿ ರಾಜ್ಯ ಸಂಯೋಜಕ ಎಂ.ಎಲ್ ತೋಮರ್ ಅಭಿಪ್ರಾಯಪಟ್ಟರು.

ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಏರ್ಪಡಿಸಿದ್ದ ಲೋಕಸಭಾ ಕ್ಷೇತ್ರದ ಬಿಎಸ್ ಪಿ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಬ್ರಿಟಿಷರ ಕಾಲದಿಂದಲೂ ದಲಿತರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಯಾವ ಬದಲಾವಣೆಗಳು ಆಗಿಲ್ಲ. ಇದಕ್ಕೆ ದಲಿತರು ಮತ್ತು ಶೋಷಿತರು ಅಧಿಕಾರದಿಂದ ವಂಚಿತರಾಗಿರುವುದೇ ಪ್ರಮುಖ ಕಾರಣ’ ಎಂದು ಹೇಳಿದರು.

‘ದೇಶದಲ್ಲಿ ದಲಿತರಿಗೆ ಅಧಿಕಾರ ಹಿಡಿಯುವ ಸಾಮರ್ಥ್ಯವಿದ್ದರೂ ಸಾಧ್ಯವಾಗುತ್ತಿಲ್ಲ. ಮತಗಳ ಮಾರಾಟದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಅವರು ದೇಶದ ಎಲ್ಲಾ ಸಮುದಾಯದವರಿಗೂ ಸಾಮಾಜಿಕ ಸಮಾನತೆ ಸಿಗಬೇಕು, ಆರ್ಥಿಕವಾಗಿ ಸ್ವಾವಲಂಬನೆ ಆಗಬೇಕು ಎಂಬ ಉದ್ದೇಶದಿಂದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಇಂದು ದಲಿತರು ತಮ್ಮ ಮತದ ಮಹತ್ವ ತಿಳಿಯದೆ ಹಣ, ಹೆಂಡಕ್ಕಾಗಿ ಅಮೂಲ್ಯವಾದ ಮತಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜಕೀಯ ಹೇಗೆ ಮಾಡಬೇಕೆಂಬುದನ್ನು ಸಂಸದ ಎಚ್.ಡಿ.ದೇವೇಗೌಡರು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಪುತ್ರರಿಗೆ ಕುಮಾರಸ್ವಾಮಿ, ರೇವಣ್ಣ ಎಂದು ಹೆಸರಿಡುವ ಮೂಲಕ ಜಾತಿ ರಾಜಕಾರಣದಿಂದ ದೂರ ಇರಲು ನಿರ್ಧಾರ ಮಾಡಿದರು. ಆದರೆ, ಈಗ ಮತ್ತೆ ರಾಜಕೀಯದಲ್ಲಿ ಗಟ್ಟಿಯಾಗಿ ಬೇರೂರಲು ಜಾತಿ ಸೂಚಕ ಬೇಕಿದೆ. ಆದ್ದರಿಂದಲೇ ತಮ್ಮ ಮೊಮ್ಮಕ್ಕಳಿಗೆ ನಿಖಿಲ್ ಗೌಡ, ಪ್ರಜ್ವಲ್ ಗೌಡ ಎಂದು ಹೆಸರಿಟ್ಟಿದ್ದಾರೆ. ಆದರೆ ಈ ರೀತಿಯ ಬುದ್ಧಿ ಅಲ್ಪಸಂಖ್ಯಾತರಾದ ನಮಗೆ ತೋರುವುದಿಲ್ಲ’ ಎಂದರು.

ಬಿಎಸ್ ಪಿ ರಾಜ್ಯಾಧ್ಯಕ್ಷ ಹರಿರಾಮ್ ಮಾತನಾಡಿ, ರಾಜಪ್ರಭುತ್ವ, ಪಾಳೆಗಾರಿಕೆ ತೊಲಗುವವರೆಗೆ ಅಲ್ಪಸಂಖ್ಯಾತ ಕುಟುಂಬಗಳು ಉಸಿರಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರದಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಬಿಎಸ್ ಪಿ ನಾಯಕಿ ಮಾಯಾವತಿ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಒಂದು ನೋಟು ಒಂದು ಓಟು ಅಭಿಯಾನದಿಂದ ಸಂಗ್ರಹವಾಗಿರುವ ₹ 75 ಸಾವಿರ ಗಳನ್ನು ರಾಜ್ಯ ನಾಯಕರಿಗೆ ನೀಡಲಾಯಿತು.

ಬಿಎಸ್ ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್, ಮಂಡ್ಯ ವಿಭಾಗೀಯ ಉಸ್ತುವಾರಿ ನರಸಿಂಹಮೂರ್ತಿ, ರಾಮನಗರ ವಿಭಾಗೀಯ ಉಸ್ತುವಾರಿ ನಾಗೇಶ್, ಚಿಕ್ಕಮಗಳೂರು ವಿಭಾಗೀಯ ಉಸ್ತುವಾರಿ ವೇಲಾಯುಧನ್, ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ಪ್ರಧಾನ ಕಾರ್ಯದರ್ಶಿ ಸ್ಟೀಫನ್‌ ಪ್ರಕಾಶ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಾಧಾಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !