ಹಾಸನ: ಅರಸೀಕೆರೆ ನಗರಸಭೆಯ 7 ಮಂದಿ ಜೆಡಿಎಸ್ ಸದಸ್ಯರು ಅನರ್ಹರಾಗಲು, ಅರಸೀಕೆರೆ ವಿಧಾನಸಭೆ ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಕಾರಣ ಎಂದು ಅರಸೀಕೆರೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ನಗರಸಭೆಯಲ್ಲಿ 21 ಮಂದಿ ಜೆಡಿಎಸ್ ಸದಸ್ಯರು ಗೆದ್ದಿದ್ದೆವು. ಅವರಲ್ಲಿ 7 ಮಂದಿ ಅನರ್ಹರಾಗಲು ಇದೇ ಸಂತೋಷ್ ಕಾರಣ. ಅರಸೀಕೆರೆಯಲ್ಲಿ ನೆಮ್ಮದಿ ಹಾಳಾಗಿ, ಅಶಾಂತಿ ನೆಲೆಸಿದ್ದರೆ ಅದಕ್ಕೆ ಇವರೇ ಕಾರಣ ಎಂದು ದೂರಿದರು.
ನಮ್ಮ ಸದಸ್ಯತ್ವ ಅನರ್ಹತೆಗೆ ಕಾನೂನು ಹೋರಾಟ ಮಾಡುವುದಾಗಿ ಎನ್.ಆರ್. ಸಂತೋಷ್ ಹೇಳಿದ್ದಾರೆ. ಅದಕ್ಕೆ ನಾವು ಸಿದ್ದರಿದ್ದೇವೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ, ಸಿದ್ದಾಂತ ಅವರಿಗಿಲ್ಲ. ನಮ್ಮ ನೈತಿಕತೆ ಬಗ್ಗೆ ಮಾತನಾಡುವ ಸಂತೋಷ್, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಒಂದೇ ದಿನದಲ್ಲಿ ಜೆಡಿಎಸ್‌ಗೆ ಬಂದವರಲ್ಲಿ ಯಾವ ಸಿದ್ಧಾಂತ ಇದೆ ಎಂದು ಪ್ರಶ್ನಿಸಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬೆಂಗಳೂರು ಸೇರಿದರು. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಯಾವುದೇ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದು ದೂರಿದರು.
ನಮ್ಮ ವಿರುದ್ಧ ಅವರು ಕಾನೂನು ಹೋರಾಟ ಮಾಡಿದರೆ, ನಾವೂ ಮಾಡುತ್ತೇವೆ. ನಾವು ಈಗಲೂ ಜೆಡಿಎಸ್‌ನಲ್ಲೇ ಇದ್ದೇವೆ. ಜೆಡಿಎಸ್-ಬಿಜೆಪಿ ಮೈತ್ರಿ ಗೊಂದಲದಿಂದಾಗಿ ನಾವು ಪ್ರತ್ಯೇಕ ಗುಂಪು ರಚಿಸಿಕೊಂಡು ಅರಸೀಕೆರೆ ಅಭಿವೃದ್ಧಿಗಾಗಿ ಕೆಲಸ ಮಾಡಲು ಅಣಿಯಾಗಿದ್ದೇವೆ. ಇವರಿಂದ ನಾವು ತತ್ವ, ಸಿದ್ಧಾಂತದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ನನ್ನನ್ನು ಲೂಟಿಕೋರ ಎನ್ನುವ ಅವರು ಸತ್ಯ ಹರಿಶ್ಚಂದ್ರರಾ? ಅವರು ಎಲ್ಲೂ ಲೂಟಿ ಮಾಡಿಲ್ಲವೇ? ನಾನು ಲೂಟಿ ಮಾಡಿದ್ದರೆ, ಭ್ರಷ್ಟಾಚಾರ ಮಾಡಿದ್ದರೆ, ಅದನ್ನು ಅವರು ಸಾಬೀತು ಪಡಿಸಲಿ. ಆ ಕ್ಷಣದಲ್ಲೇ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದರು.
ನನಗೆ ಸಂತೋಷ್ ಅಧಿಕಾರ ನೀಡಿಲ್ಲ. ನಗರದ ಜನತೆ ನೀಡಿದ್ದಾರೆ. ಇವರಿಂದಲೇ ಅರಸೀಕೆರೆಯಲ್ಲಿ ಜೆಡಿಎಸ್ ಹಾಳಾಗುತ್ತಿದೆ. ಉಸಿರುಗಟ್ಟುವ ವಾತಾವರಣ ಇದೆ ಎಂದರು.
ನನ್ನ ವಿರುದ್ಧ ಮಾಡಿರುವ ಯಾವುದೇ ಆರೋಪದಲ್ಲಿ ಹುರುಳಿಲ್ಲ. ನಾವು ಜೆಡಿಎಸ್‌ನಿಂದ ಆಯ್ಕೆಯಾಗಿದ್ದೇವೆ. ಈಗಲೂ ಅದೇ ಪಕ್ಷದಲ್ಲಿ ಇದ್ದೇವೆ. ಅರಸೀಕೆರೆಗೆ ಏನಾದರೂ ಕೆಲಸ ಆಗಬೇಕು ಎಂದರೆ ಈಗಲೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ಅವರ ಬಳಿಗೆ ಹೋಗುವುದಾಗಿ ಸ್ಪಷ್ಟಪಡಿಸಿದರು.
ನಗರಸಭೆ ಚುನಾವಣೆ ಸಂಬಂಧ ನಮಗೆ ಜೆಡಿಎಸ್‌ನಿಂದ ನೋಟಿಸ್ ನೀಡಲಾಗಿತ್ತು. ದೂರವಾಣಿ ಕರೆ ಸಹ ಮಾಡಿದ್ದರು. ಒಂದು ವರ್ಷದಿಂದ ನಮ್ಮ ಬಗ್ಗೆ ಕ್ಯಾರೇ ಎನ್ನದವರು, ಚುನಾವಣೆ ವೇಳೆ ಸಂಪರ್ಕ ಮಾಡಿದ್ದು ಬೇಸರ ತರಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಅರಸೀಕೆರೆಯಲ್ಲಿ ಸಭೆ ಮಾಡಿದಾಗ ನಾವು ಅರಸೀಕೆರೆಯಲ್ಲಿ ಇರಲಿಲ್ಲ ಎಂದು ಹೇಳಿದರು.
ಅರಸೀಕೆರೆ ನಗರಸಭೆ ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಸದಸ್ಯರಾದ ಜಾಕಿರ್ ಹುಸೇನ್, ಗಣೇಶ್, ರಾಜು, ಜೆಡಿಎಸ್ ಮುಖಂಡ ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.