ಸಲ್ಲಿಂಗ ಕಾಮ:ತೀರ್ಪಿಗೆ ಸ್ವಾಗತ, ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ನೀಡಲಿ

7

ಸಲ್ಲಿಂಗ ಕಾಮ:ತೀರ್ಪಿಗೆ ಸ್ವಾಗತ, ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ನೀಡಲಿ

Published:
Updated:
Deccan Herald

ಹಾಸನ : ‘ ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಸಮುದಾಯಕ್ಕೆ ಸ್ವಾತಂತ್ರ್ಯ ಸಿಕ್ಕಿದಷ್ಟೇ ಸಂತೋಷವಾಗಿದೆ’ ಎಂದು ಸಂಗಮ ಸಂಸ್ಥೆಯ ನಿಶಾ ಗೊಳೂರ್‌ ಸಂತಸ ವ್ಯಕ್ತಪಡಿಸಿದರು.

‘ಈವರೆಗೆ ಐಪಿಸಿಯ ಸೆಕ್ಷನ್‌ 377ರ ನಿಯಮ ಬಳಸಿಕೊಂಡು ಸಲಿಂಗಕಾಮಿ ಮಹಿಳೆಯರು, ಪುರುಷರು, ದ್ವಿಲಿಂಗಾಸಕ್ತರು, ತೃತೀಯ ಲಿಂಗಿಗಳಿಗೆ ಕಿರುಕುಳ ನೀಡಲಾಗುತ್ತಿತ್ತು. ಒಂದು ರೀತಿಯಲ್ಲಿ ಬದುಕಿನ ಹಕ್ಕನ್ನೇ ಕಸಿದುಕೊಳ್ಳಲಾಗಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿಂದೆ ಸುಪ್ರೀಂ ಕೋರ್ಟ್ ನಮ್ಮನ್ನು ತೃತೀಯ ಲಿಂಗಿಗಳೆಂದು ಹೇಳಿ, ಎಲ್ಲಾ ರೀತಿಯ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಆದರೆ, ಈವರೆಗೂ ಯಾವುದೇ ರೀತಿಯ ಸವಲತ್ತು ಸಿಕ್ಕಿರಲಿಲ್ಲ. ಬಹುದಿನಗಳ ಹೋರಾಟಕ್ಕೆ ಮನ್ನಣೆ ಸಿಕ್ಕಿದ್ದು, ಮುಂದಾದರೂ ಸಮಾಜದಲ್ಲಿ ಲಿಂಗ ತಾರತಮ್ಯ ಮಾಡದೆ ಸಮಾನತೆಯಿಂದ ನೋಡಬೇಕು’ ಎಂದು ಮನವಿ ಮಾಡಿದರು.

‘ನ್ಯಾಯಾಂಗದಿಂದ ಸ್ವಾತಂತ್ರ್ಯ ದೊರಕಿದ್ದರೂ ಪ್ರಸ್ತುತ ಸಾಮಾಜಿಕ ಮತ್ತು ಧಾರ್ಮಿಕ ನೈತಿಕತೆಯ ವಿರುದ್ಧ ಹೋರಾಟ ಮುಂದುವರೆಸಲಾಗುವುದು. ಧರ್ಮದ ಹೆಸರಿನಲ್ಲಿ ಮಹಿಳೆಯರು , ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘‘ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚು ವಿದ್ಯಾವಂತರಲ್ಲ. ಅವರ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ನೀಡಬೇಕು. ತೃತೀಯ ಲಿಂಗಿಗಳಿಗೆ ಆಧಾರ್‌ ಕಾರ್ಡ್‌ ನೀಡುವುದಿಲ್ಲ. ಪ್ರತ್ಯೇಕ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಸಾಕಷ್ಟು ಸಮಸ್ಯೆಗಳ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಕೋರ್ಟ್‌ ತೀರ್ಪು ನೀಡಿದೆ ಎಂಬ ಮಾತ್ರಕ್ಕೆ ಯಾರನ್ನು ಬಲವಂತವಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿಸಿಕೊಳ್ಳುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದವರಿಗೆ ಶಿಕ್ಷೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸಂಗಮ ಮತ್ತು ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷೆ ವರ್ಷ, ಮಂಜುಳಾ ಪ್ರಕಾಶ್ ಹಾಗೂ ದಲಿತ ಮುಖಂಡ ಹೆತ್ತೂರು ನಾಗರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !